ಚಾಮರಾಜನಗರ: ಜಾಗ ತಮ್ಮದೆಂದು ಹೇಳಿಕೊಂಡು ಏಕಾಏಕಿ ಮೂರ್ನಾಲ್ಕು ಮಂದಿ ವೃದ್ಧೆ ವಾಸವಿದ್ದ ಗುಡಿಸಲಿಗೆ ದಾಳಿ ನಡೆಸಿ, ಪಾತ್ರೆಗಳನ್ನು ಬೀದಿಗೆ ಎಸೆದು ಪುಂಡಾಟ ನಡೆಸಿರುವ ಘಟನೆ ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಗ್ರಾಮದ ಸರೋಜಮ್ಮ ಎಂಬ ವೃದ್ಧೆ ಮೇಲೆ ಅದೇ ಗ್ರಾಮದ ಶಿವಬಸಪ್ಪ ಮತ್ತು ಅವರ ಮಕ್ಕಳು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ವೃದ್ಧೆ ಒಂಟಿಯಾಗಿ ಗುಡಿಸಿಲಿನಲ್ಲೇ ಜೀವನ ಸಾಗಿಸುತ್ತಿದ್ದಾಳೆ. ಇಂದು ಏಕಾಏಕಿ ಬಂದ ಶಿವಬಸಪ್ಪ ಮತ್ತು ಮಕ್ಕಳು ವೃದ್ಧೆಯನ್ನು ಹೊರತಳ್ಳಿ ಗುಡಿಸಲನ್ನು ದ್ವಂಸ ಮಾಡಿದ್ದಲ್ಲದೇ ಪಾತ್ರೆಪಗಡೆ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಬೀದಿಗೆ ಎಸೆಯುತ್ತಿರುವ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ನಶೆಯಲ್ಲಿ ಅಪಘಾತ ಎಸಗಿ ಕಿರಿಕ್.. ಹೋಮ್ಗಾರ್ಡ್ ಬೈಕ್ಗೆ ಬೆಂಕಿ ಹಚ್ಚಿದ ಗಾಂಜಾ ಗ್ಯಾಂಗ್..!
ಈ ಧ್ವಂಸ ಕಾರ್ಯದ ನಡುವೆ ಕೂಲಿ ಹಾಗೂ ವಿಧವಾ ವೇತನ ಭತ್ಯೆಯಿಂದ ಕೂಡಿಟ್ಟಿದ್ದ ಹತ್ತಾರು ಸಾವಿರ ರೂ. ಮಾಯವಾಗಿರುವ ಆರೋಪವೂ ಕೇಳಿ ಬಂದಿದೆ. ದೌರ್ಜನ್ಯ ಪ್ರಶ್ನಿಸಲು ಬಂದವರ ಮೇಲೂ ಅವಾಚ್ಯವಾಗಿ ನಿಂದಿಸಿರುವುದು ದೃಶ್ಯದಲ್ಲಿದೆ. ಮನೆ, ಹಣ ಕಳೆದುಕೊಂಡ ವೃದ್ಧೆ ಬೀದಿಪಾಲಾಗಿದ್ದಾರೆ.
ಹುಟ್ಟಿದ ಕಾಲದಿಂದಲೂ ತಾನು ಈ ಜಾಗದಲ್ಲೇ ಇದ್ದೇನೆಂದು ವೃದ್ಧೆ ಅಳಲು ತೋಡಿಕೊಂಡಿದ್ದು, ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ಪೊಲೀಸ್ ತುರ್ತು ಸಹಾಯವಾಣಿ 112 ವಾಹನ ಸ್ಥಳಕ್ಕೆ ಭೇಟಿ ನೀಡಿದ್ದು ಚಾಮರಾಜನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.