ಚಾಮರಾಜನಗರ: ಕೊರೊನಾ ಲಾಕ್‌ಡೌನ್ ಎಫೆಕ್ಟ್ ಇನ್ನೂ ಕೂಡ ಮಾದಪ್ಪನ ಬೆಟ್ಟದಲ್ಲಿ ಮುಂದುವರೆದಿದ್ದು, ದೇವಾಲಯದ ಹುಂಡಿ ಆದಾಯದಲ್ಲಿ ಇಳಿಕೆ ಕಂಡು ಬಂದಿದೆ.
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ ನಡೆದ ಹುಂಡಿ ಎಣಿಕೆಯಲ್ಲಿ 1.47 ಕೋಟಿ ರೂ. ಸಂಗ್ರಹವಾಗಿದೆ. ಇದರೊಟ್ಟಿಗೆ 17 ಗ್ರಾಂ ಚಿನ್ನ, 985 ಗ್ರಾಂ ಬೆಳ್ಳಿ ಕೂಡ ಮಹದೇಶ್ವರನಿಗೆ ಕಾಣಿಕೆ ರೂಪದಲ್ಲಿ ಭಕ್ತರು ಅರ್ಪಿಸಿದ್ದಾರೆ.
ಪ್ರತೀ ತಿಂಗಳಿಗೊಮ್ಮೆ ನಡೆಯುತ್ತಿದ್ದ ಹುಂಡಿ ಎಣಿಕೆಯಲ್ಲಿ ಸರಾಸರಿ 1.50 ಕೋಟಿ ರೂ. ಸಂಗ್ರಹವಾಗುತ್ತಿತ್ತು. ಆದರೆ ಈ ಬಾರಿ 82 ದಿನಗಳು ಅಂದರೆ ಎರಡು ತಿಂಗಳಿಗೆ ನಡೆದ ಹುಂಡಿ ಎಣಿಕೆಯಲ್ಲಿ ಕೇವಲ 1.47 ಕೋಟಿ ರೂ. ಸಂಗ್ರಹವಾಗಿದೆ.
ಅನ್ಲಾಕ್ ಬಳಿಕವೂ ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಹುಲಿ ವಾಹನ, ಚಿನ್ನದ ರಥ ಸೇವೆಗಳು ನಡೆಯದಿರುವುದರ ಜೊತೆಗೆ ಭಕ್ತರ ವಾಸ್ತವ್ಯಕ್ಕೆ ಇನ್ನೂ ಅವಕಾಶ ಇಲ್ಲದಿರುವುದರಿಂದ ಆದಾಯದ ಮೇಲೆ ಪರಿಣಾಮ ಬೀರಿದೆ.