ಚಾಮರಾಜನಗರ: ಮರಾಠ ಅಭಿವೃದ್ಧಿ ನಿಗಮ ಜನಾಂಗದ ಆರ್ಥಿಕ ಸಬಲತೆಗೆ ಹೊರತು ಕರ್ನಾಟಕದಲ್ಲಿ ಮರಾಠಿ ಭಾಷಾಭಿವೃದ್ಧಿಗೆ ಅಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಾಠ ಜನಾಂಗ ಆರ್ಥಿಕವಾಗಿ ಹಿಂದುಳಿದಿದ್ದರಿಂದ ಇತರೆ ನಿಗಮದಂತೆ ಅದನ್ನು ಸ್ಥಾಪಿಸಲಾಗಿದೆ. ಚುನಾವಣೆ ಉದ್ದೇಶ, ಮರಾಠಿ ಭಾಷೆಯ ಅಭಿವೃದ್ಧಿಗೆಂದಲ್ಲ. ಇದನ್ನು ದಯವಿಟ್ಟು ಎಲ್ಲರೂ ಅರಿಯಬೇಕು. ಕಳೆದ ಒಂದು ವರ್ಷದಿಂದ ಆರ್ಥಿಕ ಸಂಕಷ್ಟದಲ್ಲಿದ್ದೆವು. ಈಗ ಚೇತರಿಕೆ ಕಾಣುತ್ತಿರುವುದರಿಂದ ಈ ಕ್ರಮ ಎಂದು ಸ್ಪಷ್ಟಪಡಿಸಿದರು.
ಇನ್ನು ಕರೆ ಕೊಟ್ಟಿರುವ ಕರ್ನಾಟಕ ಬಂದ್ಅನ್ನು ಹೋರಾಟಗಾರರು ಹಿಂಪಡೆಯಬೇಕು ಎಂದು ಮನವಿ ಮಾಡಿದರು. ಹುಟ್ಟೂರಿನಲ್ಲಿ ಚಿನ್ನದ ಕಿರೀಟ ಧಾರಣೆ ಮತ್ತು ಮುಂದಿನ ಸಿಎಂ ಎಂಬ ಹೇಳಿಕೆಗಳ ಕುರಿತು ಉತ್ತರಿಸಿ, ನಾನು ಈಗ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ. ಹುಟ್ಟೂರಿನಲ್ಲಿ ಚಿನ್ನದ ಕಿರೀಟ ಹಾಕುವ ಕುರಿತು ತನಗೆ ತಿಳಿದಿರಲಿಲ್ಲ. ಅಭಿವೃದ್ಧಿ ಮಾಡಿದ್ದಕ್ಕೆ ಅವರು ಗೌರವ ಸಮರ್ಪಣೆ ಮಾಡಿದರು. ಅದನ್ನು ನಾನು ಸರ್ಕಾರಕ್ಕೆ ನೀಡಿದ್ದೇನೆ. ಮುಂದಿನ ಎರಡೂವರೆ ವರ್ಷವೂ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ ಎಂದರು.
ಸಚಿವ ಸಂಪುಟ ವಿಸ್ತರಣೆಯೋ ಇಲ್ಲಾ ಪುನಾರಚನೆಯೋ ಎಂಬುದರ ಕುರಿತು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ. ನನಗೆ ಅದರ ಮಾಹಿತಿಯಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂ ಓದಿ: ನಿವಾರ್ ಸೈಕ್ಲೋನ್ ಎಫೆಕ್ಟ್: ಚೆನ್ನೈ-ಬೆಂಗಳೂರು ರೈಲು ಸಂಚಾರ ರದ್ದು