ಚಾಮರಾಜನಗರ : ಜಿಲ್ಲಾಡಳಿತ ಭವನದಲ್ಲಿನ ವಿವಿಧ ಕಚೇರಿಗೆ ಇಂದು ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ಸಮಯಕ್ಕೆ ಸರಿಯಾಗಿ ಕಚೇರಿಗೆ ಬರದ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದ ಜಿಲ್ಲಾಧಿಕಾರಿ, ಸಮರ್ಪಕ ಸಮಯಕ್ಕೆ ಕೆಲಸಕ್ಕೆ ಹಾಜರಾಗಬೇಕು. ಇಲ್ಲದಿದ್ದಲ್ಲಿ ಕಠಿಣ ಕ್ರಮ ಎದುರಿಸಬೇಕಾಗಲಿದೆ. ಕಚೇರಿ ವೇಳೆಯಲ್ಲಿ ಸಿಬ್ಬಂದಿ ಇಲ್ಲದಿದ್ದರೆ ಜನರ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಇನ್ನು, ಕೃಷಿ ಇಲಾಖೆ ಕಚೇರಿಗೆ ಅಧಿಕಾರಿ- ಸಿಬ್ಬಂದಿ ಯಾರೂ ಬರದಿದ್ದರಿಂದ ಕೊಠಡಿಗೆ ಬೀಗ ಹಾಕಿಸಿ ಅಧಿಕಾರಿ ಬಂದ ಬಳಿಕ ತನ್ನನ್ನು ಭೇಟಿ ಮಾಡುವಂತೆ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿರುವ ವಿವಿಧ ಇಲಾಖೆಯ ಕಚೇರಿಯಲ್ಲಿ ಸಮಯ ಪಾಲನೆಯಿಲ್ಲದೆ ಬೇಕಾಬಿಟ್ಟಿಯಾಗಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ಕುರಿತು ಈಟಿವಿ ಭಾರತ 'ಮಧ್ಯಾಹ್ನವೇ ಅಧಿಕಾರಿ-ಸಿಬ್ಬಂದಿ ಮನೆಗೆ: ಜಿಲ್ಲಾಡಳಿತ ಭವನ ಖಾಲಿ ಖಾಲಿ' ಎಂದು ವರದಿ ಬಿತ್ತರಿಸಿ ಗಮನ ಸೆಳೆದಿತ್ತು. ಆ ಬಳಿಕವಷ್ಟೇ ಜಿಲ್ಲಾಢಳಿತ ಭವನದ ಕಚೇರಿಗೆ ಡಿಸಿ ದಿಢೀರ್ ಭೇಟಿ ನೀಡಿ ಚುರುಕು ಮುಟ್ಟಿಸಿದ್ದಾರೆ.