ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲೇ ವಾಸ್ತವ್ಯ ಇರಬೇಕೆಂದು ಸೂಚಿಸಿದ್ದರೂ ಲೆಕ್ಕಕ್ಕೆ ತೆಗೆದುಕೊಳ್ಳದೆ ನಿತ್ಯ ಮೈಸೂರಿಗೆ ಸಂಚರಿಸುತ್ತಿದ್ದ 14 ಮಂದಿ ಸರ್ಕಾರಿ ನೌಕರರಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಕೊರೊನಾ ಲಾಕ್ಡೌನ್ನಲ್ಲಿ ಸರ್ಕಾರಿ ನೌಕರರು ಜಿಲ್ಲಾ ಕೇಂದ್ರದಲ್ಲೇ ಇರಬೇಕೆಂದು ಡಿಸಿ ಸೂಚಿಸಿದ್ದರು. ಆದರೆ, ಬಾಣಹಳ್ಳಿ ಚೆಕ್ ಪೋಸ್ಟ್ ಮೂಲಕ ಇವರು ನಿತ್ಯ ಮೈಸೂರಿಗೆ ಸಂಚರಿಸುತ್ತಿದ್ದು ಕಂಡು ಬಂದ ಹಿನ್ನೆಲೆಯಲ್ಲಿ 24 ತಾಸಿನಲ್ಲಿ ಉತ್ತರ ನೀಡುವಂತೆ ಡಿಸಿ ನೋಟಿಸ್ ನೀಡಿದ್ದಾರೆ.
ಡಯಟ್ ಪ್ರಾಂಶುಪಾಲೆ ಭಾರತಿ, ಯಳಂದೂರು ತಾಲೂಕಿನ ಶಿಶು ಅಭಿವೃದ್ಧಿ ಅಧಿಕಾರಿ ಸೋಮಶೇಖರ್, ಪ್ರಥಮ ದರ್ಜೆ ಸಹಾಯಕ ಎಂ.ಆರ್.ರವೀಂದ್ರ, ಚಾಮರಾಜನಗರದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಎಂಜಿನಿಯರ್ ಚಿದಾನಂದ್, ಗುಂಡ್ಲುಪೇಟೆ ತಾಲೂಕಿನ ಖಜಾನೆಯ ಸಹಾಯಕ ನಿರ್ದೇಶಕ ನಾಗರತ್ನ ಸೇರಿದಂತೆ ಹಲವರಿಗೆ ಜಿಲ್ಲಾಧಿಕಾರಿ ನೋಟಿಸ್ ಜಾರಿಗೊಳಿಸಿ ಬಿಸಿ ಮುಟ್ಟಿಸಿದ್ದಾರೆ.
ನೋಟಿಸ್ ತಲುಪಿದ 24 ಗಂಟೆಯೊಳಗೆ ವಿವರಣೆ ನೀಡದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.