ಚಾಮರಾಜನಗರ: ಹೆತ್ತ ಮಗನೇ ಸುಳ್ಳು ಹೇಳಿ ಆಸ್ತಿ ಬರೆಸಿಕೊಂಡು ಮೋಸ ಮಾಡಿದ್ದ, ಪ್ರಕರಣದ ವಿಚಾರಣೆಗೆ ಮಗಳು ತನ್ನ ತಾಯಿಯನ್ನು ಮಂಚದ ಸಮೇತ ಎಸಿ ಕೋರ್ಟ್ ಗೆ ಹಾಜರುಪಡಿಸಿದ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
ಚಾಮರಾಜನಗರ ಪಟ್ಟಣದ ನಿವಾಸಿ ಮುಮ್ತಾಜ್ ಬೇಗಂ (75) ತಮ್ಮ ಕೊನೆಯ ಮಗ ಸಿ.ಎನ್. ಅಬ್ದುಲ್ ರಜಾಕ್ (ಸಿದ್ದಿಕ್) ವಿರುದ್ಧ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ-2007 ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು.
ಅನಾರೋಗ್ಯದ ಕಾರಣ ಕಳೆದ ಎರಡು ತಿಂಗಳಿನಿಂದ ಮುಮ್ತಾಜ್ ಬೇಗಂ ವಿಚಾರಣೆಗೆ ಹಾಜರಾಗದ ಹಿನ್ನೆಲೆ ನೋಟಿಸ್ ನೀಡಲಾಗಿತ್ತು. ಈ ತಿಂಗಳು ಎಸಿ ಕೋರ್ಟ್‌ಗೆ ಹಾಜರಾಗಲೇಬೇಕಿದ್ದರಿಂದ ಮಗಳಾದ ಸಿ.ಎನ್.ನೂರ್ ಆಯಿಷಾ ಸಂಬಂಧಿಕರ ನೆರವು ಪಡೆದು ಹಾಸಿಗೆ ಹಿಡಿದಿರುವ ಮುಮ್ತಾಜ್ ಬೇಗಂ ಅನ್ನು ಮಂಚದ ಮೇಲೆ ಮಲಗಿಸಿಕೊಂಡೇ ಕೋರ್ಟ್‌ಗೆ ಕರೆತಂದಿದ್ದಾರೆ.
ಅಮ್ಮ ಮಗನ ಆಸ್ತಿ ಕಲಹ: ಮುಮ್ತಾಜ್ ಬೇಗಂಗೆ ಮೂರು ಹೆಣ್ಣು ಮತ್ತು ಆರು ಗಂಡು ಮಕ್ಕಳಿದ್ದಾರೆ. ಪತಿ ದಿ.ನಿಸಾರ್ ಅಹ್ಮದ್ ಈಕೆಯ ಹೆಸರಿಗೆ ಸರ್ವೇ ನಂ-282 ರಲ್ಲಿ ವಿಸ್ತೀರ್ಣ 3.28.00 ಎಕರೆ ಬರೆದಿದ್ದರಂತೆ. ಆದರೆ ಇದನ್ನು ಕೊನೆಯ ಮಗ ಅಬ್ದುಲ್ ರಜಾಕ್ ಹಜ್ ಯಾತ್ರೆಗೆ ಪಾಸ್‌ಪೋರ್ಟ್ ಮಾಡಿಸಿಕೊಡುತ್ತೇನೆ ಎಂದು ಸುಳ್ಳು ಹೇಳಿ ಅವನ ಹೆಸರಿಗೆ ಬರೆಸಿಕೊಂಡಿರುವುದಾಗಿ ಅರ್ಜಿಯಲ್ಲಿದೆ.
ಇದನ್ನೂ ಓದಿ: ಕಾರವಾರ: ತಂದೆಯೊಂದಿಗೆ ಸೇರಿ ಹೆತ್ತ ತಾಯಿ ಕೊಂದ ಮಗ
ತನ್ನ ಹೆಸರಲ್ಲಿ ಲಕ್ಷಾಂತರ ರೂ ಸಾಲ ಪಡೆದಿದ್ದಾನೆ. ಇದನ್ನು ಕೇಳಿದರೆ ಕೊಲೆ ಬೆದರಿಕೆ ಹಾಕುತ್ತಾನೆ. ಆದ್ದರಿಂದ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ್ದು, ಕೊಲೆ ಬೆದರಿಕೆ ಹಾಕಿದಾಗ ಪೊಲೀಸರಿಗೂ ದೂರು ನೀಡಲು ಮುಂದಾಗಿರುವುದಾಗಿ ಪತ್ರದಲ್ಲಿದೆ.
ಈ ಕುರಿತು ಎಸಿ ಗೀತಾ ಹುಡೇದ ಪ್ರತಿಕ್ರಿಯೆ ನೀಡಿದ್ದು, ಈ ಪರಿಸ್ಥಿತಿಯಲ್ಲಿ ವಿಚಾರಣೆಗೆ ಹಾಜರಾಗೋದು ಬೇಡ ಎಂದು ಮೊದಲೇ ತಿಳಿಸಿದ್ದೆ. ಮುಮ್ತಾಜ್ ಬೇಗಂ ಹಾಸಿಗೆ ಹಿಡಿದಿರುವ ಫೋಟೋ ಅನ್ನು ಈ ಮೊದಲೇ ನಮ್ಮ ಸಿಬ್ಬಂದಿಗೆ ಕಳುಹಿಸಿದ್ದರು. ಈ ಪರಿಸ್ಥಿತಿಯಲ್ಲಿ ಅವರನ್ನು ವಿಚಾರಣೆಗೆ ಕರೆತರುವುದು ಬೇಡ ಎಂದು ಮೊದಲೇ ತಿಳಿಸಲಾಗಿತ್ತು. ಆದರೂ ಅವರ ಮನೆಯವರು ಮಂಚದ ಸಮೇತ ಆ ತಾಯಿಯನ್ನು ಕರೆತಂದಿದ್ದಾರೆ ಎಂದು ತಿಳಿಸಿದರು.