ಚಾಮರಾಜನಗರ: ಜಿಲ್ಲೆಗೆ ಮೊದಲ ಹಂತದಲ್ಲಿ 4 ಸಾವಿರ ಡೋಸ್ ಕೊವಿಶೀಲ್ಡ್ ಲಸಿಕೆ ಬಂದಿದ್ದು, 6 ಸ್ಥಳಗಳಲ್ಲಿ ಕೊರೊನಾ ಲಸಿಕೆ ವಿತರಣಾ ಅಭಿಯಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಗೆ ಮೊದಲ ಹಂತದಲ್ಲಿ 4 ಸಾವಿರ ಡೋಸ್ ಕೊವಿಶೀಲ್ಡ್ ಲಸಿಕೆ ಬಂದಿದ್ದು, ಒಂದು ಬಾಟಲಿಯಲ್ಲಿನ ಔಷಧಿಯನ್ನು 10 ಮಂದಿಗೆ ನೀಡಬಹುದಾಗಿದೆ. 6,363 ಆರೋಗ್ಯ ಇಲಾಖೆ ಸಿಬ್ಬಂದಿ ಪೈಕಿ ಮೊದಲ ಹಂತದಲ್ಲಿ 814 ಮಂದಿಗೆ ಚುಚ್ಚುಮದ್ದು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಚಾಮರಾಜನಗರ ಮೆಡಿಕಲ್ ಕಾಲೇಜು, ಗುಂಡ್ಲುಪೇಟೆ ತಾಲೂಕು ಆಸ್ಪತ್ರೆ, ಯಳಂದೂರು ತಾಲೂಕು ಆಸ್ಪತ್ರೆ, ಕೊಳ್ಳೇಗಾಲ ತಾಲೂಕು ಆಸ್ಪತ್ರೆ, ಕೊಳ್ಳೇಗಾಲ ನಗರ ಅರೋಗ್ಯ ಕೇಂದ್ರ ಹಾಗೂ ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಆರು ಕಡೆ ಲಸಿಕೆ ನೀಡಲಾಗುವುದು. ಜೂಮ್ ಲಿಂಕ್ ಮೂಲಕ ಎಲ್ಲಾ ಕೇಂದ್ರಗಳ ಮೇಲೂ ನಿಗಾ ಇಡಲಾಗುತ್ತದೆ. ಜೊತೆಗೆ ರಾಜ್ಯ ಸರ್ಕಾರಕ್ಕೆ ಪ್ರತಿ ತಾಸಿಗೊಮ್ಮೆ ವರದಿ ನೀಡಲಿದ್ದೇವೆ ಎಂದರು.
ಓದಿ: ಯುವಕರ ಹಳೆ ದ್ವೇಷ ಹತ್ಯೆಯಲ್ಲಿ ಅಂತ್ಯ.. ಗ್ರಾಮಗಳ ಮಧ್ಯೆ ಮಾರಾಮಾರಿ
ಇನ್ನು, ಆರೋಗ್ಯ ಸಿಬ್ಬಂದಿ ಬಳಿಕ ಕಂದಾಯ ಇಲಾಖೆ, ನಗರಸಭೆ, ಪುರಸಭೆ ಸಿಬ್ಬಂದಿಗೂ ಹಂತ-ಹಂತವಾಗಿ ಲಸಿಕೆ ನೀಡಲಾಗುತ್ತದೆ. ಕೊವಿಶೀಲ್ಡ್ ಔಷಧಿ ಮಾತ್ರ ಬಂದಿದ್ದು, ಕೋವ್ಯಾಕ್ಸಿನ್ ಬರಬೇಕಿದೆ ಎಂದು ಮಾಹಿತಿ ನೀಡಿದರು.