ಚಾಮರಾಜನಗರ: ಕೊರೊನಾ ಮಹಾಮಾರಿ ವಕ್ಕರಿಸುವುದಕ್ಕೂ ಮುನ್ನ ಜಿಲ್ಲೆಯ ಜನರನ್ನು ಕಾಡುತ್ತಿದ್ದ ಡೆಂಗ್ಯೂ ಹಾಗೂ ಚಿಕುನ್ ಗುನ್ಯಾ ಸಾಂಕ್ರಾಮಿಕ ರೋಗಗಳು ಈ ಬಾರಿ ಹೇಳ ಹೆಸರಿಲ್ಲದಂತಾಗಿವೆ.
ಕೊರೊನಾ ತಡೆಗಟ್ಟಲು ಜನರು ಕೈಗೊಳ್ಳುತ್ತಿದ್ದ ಮುನ್ನೆಚ್ಚರಿಕೆಯಿಂದ ಹಾಗೂ ಆರೋಗ್ಯ ಇಲಾಖೆ ನಡೆಸಿದ ನಿರಂತರ ಅರಿವು, ಜಾಗೃತಿ ಮೂಲಕ ಜಿಲ್ಲೆಯ ಜನರನ್ನು ಹೆಚ್ಚಾಗಿ ಬಾಧಿಸುತ್ತಿದ್ದ ಚಿಕುನ್ ಗುನ್ಯಾ ಮತ್ತು ಡೆಂಗ್ಯೂ ಜ್ವರ ಈ ಬಾರಿ ತೀರಾ ಕಡಿಮೆಯಾಗಿದ್ದು, ಪ್ರತೀ ವರ್ಷ ವಕ್ಕರಿಸುತ್ತಿದ್ದ ಸಾಂಕ್ರಾಮಿಕ ರೋಗದ ಭೀತಿ ಈ ಬಾರಿ ಇಲ್ಲವಾಗಿದೆ.
ಈ ಕುರಿತು 'ಈಟಿವಿ ಭಾರತ'ದೊಂದಿಗೆ ಡಿಹೆಚ್ಒ ಡಾ. ರವಿ ಮಾತನಾಡಿ, ಜನವರಿಯಿಂದ ಆಗಸ್ಟ್ ವರೆಗೆ ಕೇವಲ 9 ಚಿಕುನ್ ಗುನ್ಯಾ ಕೇಸ್ಗಳು ಪತ್ತೆಯಾಗಿವೆ. ಹಿಂದಿನ ವರ್ಷ 57, ಅದರ ಹಿಂದಿನ ವರ್ಷ 47 ಪ್ರಕರಣಗಳು ವರದಿಯಾಗಿದ್ದವು. ಅದೇ ರೀತಿ, ಡೆಂಗ್ಯೂ 28 ಮಂದಿಗೆ ಬಂದಿದ್ದು, ಹಿಂದಿನ ವರ್ಷ ಈ ಸಂಖ್ಯೆ 197 ಇತ್ತು ಎಂದು ಮಾಹಿತಿ ನೀಡಿದರು.
ಇನ್ನೂ ಮಲೇರಿಯಾ ಈ ವರ್ಷ ಮತ್ತು ಕಳೆದ ವರ್ಷ ಕೇವಲ ಒಂದು ಪ್ರಕರಣ ಮಾತ್ರ ಪತ್ತೆಯಾಗಿತ್ತು. ಎರಡೂ ಪ್ರಕರಣಗಳಲ್ಲಿ ಮೂಲ ತಮಿಳುನಾಡಾಗಿತ್ತು. 2018ರಲ್ಲಿ ಹನೂರು ತಾಲೂಕಿನ ಪಾಲಾರ್ ಸುತ್ತಮುತ್ತ 8 ಮಂದಿಗೆ ಮಲೇರಿಯಾ ಬಂದಿತ್ತು, ಅದು ಕೂಡ ತಮಿಳುನಾಡಿನ ಸಂಪರ್ಕ ಇಟ್ಟುಕೊಂಡವರಿಗೇ ಆಗಿತ್ತು ಎಂದು ತಿಳಿಸಿದರು.
ಕಾರಣ:
ಕೋವಿಡ್ ಮುನ್ನೆಚ್ಚರಿಕೆಯಿಂದಾಗಿ ಮನೆಯ ಸುತ್ತಮುತ್ತಲೂ ಜನರು ಸ್ವಚ್ಛತೆ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡಿದ್ದಾರೆ. ಅಲ್ಲದೇ, ಹೊರ ರಾಜ್ಯಗಳ ಸಂಚಾರ ಮಿತವಾಗಿದ್ದು ಜಿಲ್ಲೆಯಲ್ಲಿ ಡೆಂಘಿ, ಚಿಕುನ್ ಗುನ್ಯಾ ಕಡಿಮೆಯಾಗುವಲ್ಲಿ ಕಾರಣವಾಗಿದೆ. ಜೊತೆಗೆ, ಆರೋಗ್ಯ ಇಲಾಖೆಯ ಡಾ. ಕಾಂತರಾಜು ನೇತೃತ್ವದಲ್ಲಿ ಕೊರೊನಾ ಸಂದರ್ಭದಲ್ಲೂ ಪ್ರತಿ ತಿಂಗಳ ಮೊದಲನೇ ಹಾಗೂ ಮೂರನೇ ಶನಿವಾರದಲ್ಲಿ ಲಾರ್ವ ಸರ್ವೆ ನಡೆಸಿ ನೀರು ನಿಲ್ಲದಂತೆ ಕ್ರಮ ವಹಿಸಿದ್ದು ಕೂಡ ಸಾಂಕ್ರಾಮಿಕ ರೋಗಗಳ ಬಾಧೆ ಕಡಿಮೆಯಾಗಲು ಸಹಕಾರಿಯಾಗಿದೆ.