ಚಾಮರಾಜನಗರ: ಇಂದು ಹೊಸದಾಗಿ 37 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 745 ಕ್ಕೆ ಏರಿಕೆಯಾಗಿದೆ. ಇಂದು 33 ಮಂದಿ ಬಿಡುಗಡೆಯಾಗಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ 496 ರಷ್ಟಿದ್ದು 594 ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಮೇಲೆ ನಿಗಾ ಇಡಲಾಗಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 11 ಆಗಿದೆ. 8 ಮಂದಿ ಐಸಿಯುನಲ್ಲಿದ್ದಾರೆ. ಇಂದಿನ 37 ಪ್ರಕರಣದಲ್ಲಿ ಚಾಮರಾಜನಗರ 15, ಕೊಳ್ಳೇಗಾಲ 8, ಹನೂರು 3, ಗುಂಡ್ಲುಪೇಟೆ 09, ಯಳಂದೂರು ತಾಲೂಕಿನಲ್ಲಿ 2 ಪ್ರಕರಣಗಳು ದಾಖಲಾಗಿದೆ.
ಕೊಳ್ಳೇಗಾಲ ತಾಲೂಕಿನ ಮಧುವಿನಹಳ್ಳಿ ಗ್ರಾಮದ 15 ದಿನದ ಮಗುವೊಂದು ಕೊರೊನಾ ಮಣಿಸಿ ತಾಯಿಯೊಂದಿಗೆ ಮನೆಗೆ ಮರಳಿದೆ. ಈ ಕಂದಮ್ಮನ ಬಿಡುಗಡೆ ಸೋಂಕಿತರಲ್ಲಿ ಆತ್ಮಸ್ಥೈರ್ಯ ಉಂಟುಮಾಡಿದೆ. ಇದರೊಟ್ಟಿಗೆ ಕೊಳ್ಳೇಗಾಲದ ಶಂಕರಪುರದ 11 ತಿಂಗಳ ಮಗು, ಯಳಂದೂರಿನ ಗೌತಮ ಬಡಾವಣೆಯ 4 ವರ್ಷದ ಗಂಡು, ಚಾಮರಾಜನಗರದ 14 ವರ್ಷದ ಬಾಲಕಿ, ಗುಂಡ್ಲುಪೇಟೆ ಕೆಎಸ್ಎನ್ ಬಡಾವಣೆಯ 7 ವರ್ಷದ ಬಾಲಕಿ ಗುಣಮುಖರಾಗಿ ಇಂದು ಮನೆಗೆ ತೆರಳಿದ್ದಾರೆ.
ಪುಟ್ಟರಂಗಶೆಟ್ಟಿ ಹೋಂ ಕ್ವಾರಂಟೈನ್ :
ಅಂತ್ಯಸಂಸ್ಕಾರ ನಡೆದ ಬಳಿಕ ಕೊರೊನಾ ದೃಢ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೋಂ ಕ್ವಾರಂಟೈನ್ ಆಗಿದ್ದಾರೆ. ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್ಗೆ ಒಳಗಾಗಿದ್ದಾರೆ.