ಚಾಮರಾಜನಗರ: ಮಹಾರಾಷ್ಟ್ರದಿಂದ ಬಂದಿದ್ದ ವೈದ್ಯಕೀಯ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ ಬಂದಿರುವುದಾಗಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೋಂಕು ಬಂದಿರುವ ವಿದ್ಯಾರ್ಥಿ ಮಹಾರಾಷ್ಟ್ರದವನಾಗಿದ್ದು, ನಮ್ಮ ಜಿಲ್ಲೆಗೆ ಸಂಬಂಧಿಸುವುದಿಲ್ಲ. ಜಿಲ್ಲೆ ಸುರಕ್ಷಿತವೆಂದು ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಪಾಲಿಮೇಡುವಿನ ಸೋದರಮಾವನ ಮನೆಗೆ ಮಧುಮೇಹಿ ತಾಯಿಯನ್ನು ಬಿಡಲು ಬಂದಿದ್ದ ವೇಳೆ ಸೋಂಕಿನ ಪ್ರಕರಣ ಬೆಳಕಿಗೆ ಬಂದಿದೆ. ಸೋಂಕಿತನ ತಾಯಿ ಹಾಗೂ ಅಣ್ಣನ ವರದಿ ನೆಗೆಟಿವ್ ಬಂದಿವೆ ಎಂದು ತಿಳಿಸಿದರು.
ಸೇವಾಸಿಂಧು ಪೋರ್ಟಲ್ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳದೇ ಸುರಕ್ಷಿತವೆಂದು ಭಾವಿಸಿ ತಾಯಿಯನ್ನು ಜಿಲ್ಲೆಗೆ ಬಿಡಲು ಬಂದ ಒಂದು ದಿನದ ಬಳಿಕ ಜ್ವರ ತಪಾಸಣಾ ಕೇಂದ್ರದಲ್ಲಿ ವಿದ್ಯಾರ್ಥಿ ಪರೀಕ್ಷೆ ಮಾಡಿಸಿದ್ದಾನೆ. ನಂತರ ವರದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಸದ್ಯ, ಆತನ ಸೋದರಮಾವ ಮತ್ತು ಅವರ ಪತ್ನಿ, ಮಕ್ಕಳು ಪ್ರಾಥಮಿಕ ಸಂಪರ್ಕಿತರಾಗಿದ್ದು, ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಈಗಲೂ ಚಾಮರಾಜನಗರ ಹಸಿರುವಲಯದಲ್ಲೇ ಇದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಸೋಂಕಿತ ವ್ಯಕ್ತಿಗೆ ಜಿಲ್ಲೆಯಲ್ಲಿ ಚಿಕಿತ್ಸೆ ನೀಡಿದರೂ ಆತ ನಮ್ಮ ಜಿಲ್ಲೆಯವನಾಗದಿರುವುದರಿಂದ ಇತರೆ ಪಟ್ಟಿಯಲ್ಲಿ ಆತ ಒಳಪಡಲಿದ್ದು, ಚಾಮರಾಜನಗರ ಹಸಿರು ವಲಯದಲ್ಲೇ ಇದೆ. ಜಿಲ್ಲೆಗೆ ಅವರು ಬಂದರೂ ಜಾಗರೂಕವಾಗಿ ಎಲ್ಲೂ ಹೊರಗಡೆ ತಿರುಗಾಡಿಲ್ಲ ಎಂದು ಡಿಸಿ ಹೇಳಿದ್ದಾರೆ.