ಚಾಮರಾಜನಗರ: ತಮಿಳುನಾಡಿನ ಕೊಯಮತ್ತೂರು ಆದ ಬಳಿಕ ಈಗ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಕೊರೊನಾ ಮಾರಮ್ಮನ ದೇವಾಸ್ಥಾನ ಆರಂಭಗೊಂಡಿದ್ದು, ಮೂರ್ತಿಯೂ ಪ್ರತಿಷ್ಠಾಪನೆಗೊಂಡಿದೆ.
ಗ್ರಾಮದ ಯಶೋಧಮ್ಮ ಎಂಬುವವರು ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ಈಗ 3 ದಿನಗಳ ಹಿಂದೆ ಚಾಮುಂಡೇಶ್ವರಿ ದೇವರು ಕನಸಿನಲ್ಲಿ ಬಂದು, ಹರಿಯುವ ನೀರಿನಿಂದ ಕಲ್ಲು ತಂದು ಪ್ರತಿಷ್ಠಾಪಿಸಿ ಪೂಜಿಸಿದರೆ ಕೊರೊನಾ ತೊಲಗಿ, ಜಗತ್ತಿನಲ್ಲಿ ಶಾಂತಿ ನೆಲೆಸಲಿದೆ ಎಂದು ಹೇಳಿದ್ದರಿಂದ ಗ್ರಾಮದ ಹೊರವಲಯದಲ್ಲಿ ದೇವಾಲಯ ತಲೆ ಎತ್ತಿದೆ ಎನ್ನಲಾಗಿದೆ.
ಈ ಕುರಿತು ಯಶೋಧಮ್ಮ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ವೃಕ್ಷಗಳನ್ನು ಕಡಿಯುತ್ತಿರುವುದು, ಹೆಣ್ಣು ಭ್ರೂಣ ಹತ್ಯೆಯಾಗುತ್ತಿರುವುದರಿಂದ ಈ ಹಿಂದೆ ಇದ್ದ ಕೌಮಾರಿ ಎಂಬ ದೇವರು ಈಗ ಕೊರೊನಾ ಮಾರಮ್ಮನಾಗಿ ಬದಲಾಗಿದ್ದಾಳೆ. ಮೂರು ದಿನಗಳಿಂದ ಹೋಮ, ಅಭಿಷೇಕ ನೆರವೇರಿಸಿ ಗುರುವಾರ ಮಧ್ಯರಾತ್ರಿ 1ರ ಸುಮಾರಿಗೆ ದೇವರನ್ನು ಪ್ರತಿಷ್ಠಾಪಿಸಿದ್ದೇನೆ ಎಂದ ಅವರು, 48 ದಿನಗಳ ಬಳಿಕ ಮತ್ತೊಂದು ಮಹಾಪೂಜೆ ನೆರವೇರಿಸುವುದಾಗಿ ತಿಳಿಸಿದರು.
ಕೊರೊನಾ ಮಾರಮ್ಮ ದೇವಾಲಯದಿಂದ ಒಳಿತಾಗಲಿದೆ ಎಂಬುದನ್ನು ಯಾರು ಒಪ್ಪುವುದಿಲ್ಲ. ಆದ್ದರಿಂದ ಈ ವಿಚಾರವನ್ನು ನಾನು ಯಾರಿಗೂ ಹೇಳಲಿಲ್ಲ. ನನಗೆ ನಂಬಿಕೆ ಇದೆ ಕೊರೊನಾ ಮಾರಮ್ಮ ಶೀಘ್ರವೇ ಒಳಿತು ಮಾಡಲಿದ್ದಾಳೆ ಎಂದು ತಿಳಿಸಿದ ಅವರು, ದಿನವೂ ಎರಡು ಬಾರಿ ಶಾಂತಿ ಮಂತ್ರಗಳನ್ನು ಹೇಳಿಕೊಂಡು ಪೂಜಿಸುತ್ತಿರುವುದಾಗಿ ಮಾಹಿತಿ ಹಂಚಿಕೊಂಡರು.