ಚಾಮರಾಜನಗರ : ಭಾನುವಾರ ರಜೆಯ ಮೋಜಿನಲ್ಲಿ ನಿಯಮ ಉಲ್ಲಂಘಿಸಿ ಕಾಲ ಕಳೆಯುತ್ತಿದ್ದ ಜನರಿಗೆ ಮಾಸ್ಕ್ ಧರಿಸದೆ ಅಸಡ್ಡೆಯಿಂದ ಅಂಗಡಿಯಲ್ಲಿ ವಹಿವಾಟು ನಡೆಸುತ್ತಿದ್ದ ವ್ಯಾಪಾರಿಗಳು, ಗ್ರಾಹಕರುಗಳಿಗೆ ಜಿಲ್ಲಾಧಿಕಾರಿ ಸೀಟಿ ಊದಿ ಕೊರೊನಾ ಎಚ್ಚರಿಕೆ ನೀಡಿದರು.
ಕೊರೊನಾ ನಿಯಮ ಕಟ್ಟು ನಿಟ್ಟಿನ ಜಾರಿಗಾಗಿ ವಿಶೇಷ ಕಾರ್ಯ ಪಡೆಗೆ ಚಾಮರಾಜನಗರ ಡಿಸಿ ಡಾ. ಎಂ ಆರ್ ರವಿ ಚಾಲನೆ ಕೊಟ್ಟರು. ಬಳಿಕ ಸೀಟಿ ಊದುತ್ತಾ ನಗರ ಪ್ರದಕ್ಷಿಣೆ ನಡೆಸಿ ಕೊರೊನಾ ಕುರಿತು ಅರಿವು ಮೂಡಿಸಿದರು. ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಿ, ಭಯ ಬೇಡ. ಆದರೆ, ಎಚ್ಚರಿಕೆಯಿಂದಿರಿ ಎಂದು ತಿಳಿಸಿದರು.
ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಅಸಡ್ಡೆಯಿಂದ ಇದ್ದ ಭುವನೇಶ್ವರಿ ವೃತ್ತದ ಗಿರವಿ ಅಂಗಡಿ, ಚಿಕ್ಕಂಗಡಿ ಬೀದಿಯ ಪಾತ್ರೆ ಅಂಗಡಿ ಹಾಗೂ ಮಸೀದಿ ರಸ್ತೆಯ ಮೊಬೈಲ್ ರಿಪೇರಿ ಅಂಗಡಿಗಳನ್ನು ಮುಚ್ಚಿಸಿ ತಾತ್ಕಾಲಿಕವಾಗಿ ಅವರ ವ್ಯಾಪಾರ ಲೈಸೆನ್ಸ್ ರದ್ದುಗೊಳಿಸಿ, ದಂಡ ವಿಧಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಮಾಸ್ಕ್ ಧರಿಸದೇ ಮದುವೆಗೆ ತೆರಳುತ್ತಿದ್ದ ಮಹಿಳೆಯರಿಗೆ, ಗುಂಪಾಗಿ ಕುಳಿತು ಹರಟೆ ಹೊಡೆಯುತ್ತಿದ್ದ ಮಾಂಸದಂಗಡಿ ವ್ಯಾಪಾರಿಗಳಿಗೆ 'ಜೀವ ಇದ್ದರಷ್ಟೇ ವ್ಯಾಪಾರ, ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಹೆಚ್ಚುತ್ತಿವೆ. ಯಾವುದೇ ಕಾರಣಕ್ಕೂ ಅಸಡ್ಡೆ ಪ್ರದರ್ಶಿಸಬೇಡಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ' ಎಂದರು.
ಯೋಜನಾ ನಿರ್ದೇಶಕ ಸುರೇಶ್, ನಗರಸಭೆ ಆಯುಕ್ತ ಕರಿ ಬಸವಯ್ಯ, ಪೊಲೀಸರು, ಡಿಸಿ ಅವರಿಗೆ ಸಾಥ್ ನೀಡಿದರು. ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಗೆ ಮಾಸ್ಕ್ ಕೊಟ್ಟು ದಂಡ ವಿಧಿಸಿದರು. ಬಸ್ಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ತಿಳಿ ಹೇಳಿದರು.
ಇದನ್ನೂ ಓದಿ: ಮಂಗಳೂರು ರೈಲ್ವೆ, ಏರ್ಪೋರ್ಟ್ಗಳಲ್ಲಿ ಪಾಲನೆಯಾಗುತ್ತಿವೆಯಾ ಕೋವಿಡ್ ನಿಯಮಾವಳಿಗಳು?
ಇಂದಿನಿಂದ ಈ ಸುರಕ್ಷಾ ಪಡೆಯ 65 ಮಂದಿ ಸ್ವಯಂ ಸೇವಕರು ಜಿಲ್ಲಾದ್ಯಂತ ಕಾರ್ಯಾಚರಣೆ ನಡೆಸಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿ ಜಾಗೃತಿ ಮೂಡಿಸಲಿದ್ದಾರೆ. ಛತ್ರಗಳು, ಹೋಟೆಲ್, ಮಾರುಕಟ್ಟೆ, ಬಸ್ ನಿಲ್ದಾಣಗಳಿಗೆ ತೆರಳಿ ಅರಿವು ಮೂಡಿಸಲಿದ್ದಾರೆ. ಮೊದಲಿಗೆ ಸೀಟಿ ಹೊಡೆದು ಜನರನ್ನು ಎಚ್ಚರಿಸಲಿದ್ದು, ಬಳಿಕ ದಂಡ ವಿಧಿಸುತ್ತಾರೆ.