ಚಾಮರಾಜನಗರ: ಪಟ್ಟಣ ಪಂಚಾಯಿತಿಯ ಸದಸ್ಯರೊಬ್ಬರು 22 ಲಕ್ಷ ರೂ. ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಹನೂರು ಪ.ಪಂ 13ನೇ ವಾರ್ಡಿನ ಸದಸ್ಯ ಮಹೇಶ್ ಅವರ ಮೇಲೆ ಆರೋಪ ಬಂದಿದ್ದು, ಇವರಿಗೆ ಪಟ್ಟಣದ ಬಿಪಿಸಿಎಲ್ ಪೆಟ್ರೋಲ್ ಬಂಕ್‌ನಲ್ಲಿ ಬಂಕಿನ ನಿರ್ವಹಣೆ, ಸಿಬ್ಬಂದಿ ನೇಮಕ, ಮಾರಾಟವಾದ ಇಂಧನದ ಹಣವನ್ನು ಬ್ಯಾಂಕಿಗೆ ಕಟ್ಟುವುದು ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ನೀಡಲಾಗಿತ್ತು.
ಆದರೆ ಮಹೇಶ ಇಂಧನ ಮಾರಾಟದಿಂದ ಬಂದ ಹಣದಲ್ಲಿ ದೈನಂದಿನ ಬ್ಯಾಂಕಿಗೆ ಪಾವತಿ ಮಾಡುವಲ್ಲಿ 3.40 ಲಕ್ಷ ಹಣವನ್ನು ಕಡಿಮೆ ಪಾವತಿ ಮಾಡಿದ್ದಾನೆ. ಅಲ್ಲದೆ ಜೂನ್ 1 ರಂದು ಮಾರಾಟದ ಹಣದಲ್ಲಿ 75 ಸಾವಿರ ರೂ. ತನ್ನ ಸ್ವಂತಕ್ಕೆ ಬಳಕೆ ಮಾಡಿಕೊಂಡಿರುತ್ತಾನೆ ಎಂದು ಆರೋಪಿಸಲಾಗಿದೆ.
ಅಲ್ಲದೆ ಪಟ್ಟಣ ಪಂಚಾಯಿತಿಯ 9ನೇ ವಾರ್ಡಿನ ಸದಸ್ಯ ಗಿರೀಶ್ ಎಂಬುವವರಿಗೆ ಸೇರಿದ ಬೋರ್‌ವೆಲ್ ಕಂಪನಿಗೆ 7.83 ಲಕ್ಷ, ಜ್ಞಾನೇಂದ್ರ ಎಂಬುವವರಿಗೆ ಸೇರಿದ ಬೋರ್‌ವೆಲ್ ಕಂಪನಿಗೆ 5.77 ಲಕ್ಷ, ಪ್ರಭು ಎಂಬ ಗ್ರಾಹಕರಿಗೆ 1.21 ಲಕ್ಷ ಸಾಲ ನೀಡಿರುವುದಾಗಿ ಲೆಕ್ಕದ ಪುಸ್ತಕದಲ್ಲಿ ಸುಳ್ಳು ಲೆಕ್ಕ ಬರೆದಿದ್ದಾನೆ ಎಂದು ಬಂಕ್ನ ಮಾಲೀಕ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಯೂ ಆದ ಮುತ್ತುಸ್ವಾಮಿ ನಾಯ್ಡು ಹನೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಳ್ಳತನ ಆರೋಪ: ಹಣಕಾಸಿನ ವ್ಯವಹಾರದಲ್ಲಿ ಸುಳ್ಳು ಲೆಕ್ಕ ಬರೆದು 22.80 ಲಕ್ಷ ಲಪಟಾಯಿಸಿರುವುದಲ್ಲದೇ, ಪೆಟ್ರೋಲ್ ಬಂಕಿಗೆ ಸೇರಿರುವ ಪ್ರತಿದಿನದ ವ್ಯವಹಾರ ಬರೆದಿರುವ ಪುಸ್ತಕ, ಗೌತಮ್ ಶಾಲಾ ವಾಹನಗಳಿಗೆ ಇಂಧನ ಹಾಕಿರುವ ಬಿಲ್, ನಾಗೇಂದ್ರ ಮತ್ತು ಗಿರೀಶ್ ಎಂಬುವವರಿಗೆ ಸೇರಿದ ಬೋರ್‌ವೆಲ್ ಕಂಪೆನಿಗಳಿಗೆ ಸಾಲದ ಬಿಲ್‌ಗಳು, ದೈನಂದಿನ ನಿರ್ವಹಣೆ ಮತ್ತು ಇತರೆ ಗ್ರಾಹಕರಿಗೆ ನೀಡಿರುವ ಸಾಲದ ಮಾಹಿತಿಯ ಪುಸ್ತಕಗಳು, ಬಂಕಿಗೆ ಸೇರಿದ ಕೊಠಡಿಗಳಿಗೆ ಸೇರಿದ ಬೀಗದ ಕೀಗಳನ್ನು ಕಳವು ಮಾಡಿರುತ್ತಾನೆ ಎಂದು ಮಾಲೀಕ ದೂರಿದ್ದಾರೆ.