ಚಾಮರಾಜನಗರ: ಕದ್ದುಮುಚ್ಚಿ ಬಾಲ್ಯ ವಿವಾಹಕ್ಕೆ ಸಿದ್ಧತೆ ನಡೆಸಿದ್ದ ವೇಳೆ ಒಡಿಪಿ ಸಂಸ್ಥೆ ಹಾಗೂ ಮಕ್ಕಳ ಸಹಾಯವಾಣಿ ತಂಡ ಬಾಲಕಿಯನ್ನು ರಕ್ಷಿಸಿದ ಘಟನೆ ಚಾಮರಾಜನಗರ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ತಾಲೂಕಿನ ಗ್ರಾಮವೊಂದರ 17 ವರ್ಷದ ಅಪ್ರಾಪ್ತೆಯನ್ನು ತಮಿಳುನಾಡಿನ ತಾಳವಾಡಿಯ ಬಸವೇಗೌಡರ ಮಗ ರಘು(26) ಎಂಬಾತನೊಂದಿಗೆ ವಿವಾಹ ಮಾಡಿಕೊಡಲು ನಿಶ್ಚಯಿಸಲಾಗಿತ್ತು ಎಂದು ತಿಳಿದುಬಂದಿದೆ.
ಮಕ್ಕಳ ಸಹಾಯವಾಣಿಗೆ ಬಂದ ಮಾಹಿತಿ ಮೇರೆಗೆ ಒಡಿಪಿ ಸಂಸ್ಥೆ ಮತ್ತು ಮಕ್ಕಳ ಸಹಾಯವಾಣಿ ತಂಡ ವಿವಾಹ ಸ್ಥಳಕ್ಕೆ ತೆರಳಿ ಅಪ್ರಾಪ್ತೆಯನ್ನು ರಕ್ಷಿಸಿ ಬಾಲಮಂದಿರದ ವಶಕ್ಕೆ ಒಪ್ಪಿಸಲಾಗಿದೆ.
ಎಷ್ಟೇ ಅರಿವು ಮೂಡಿಸಿದರೂ ಬಾಲ್ಯ ವಿವಾಹ ಪ್ರಕರಣ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಸಮುದಾಯದ ಮುಖಂಡರು ಈ ಸಾಮಾಜಿಕ ಪಿಡುಗು ನಿವಾರಣೆ ಕುರಿತು ಚಿಂತಿಸಬೇಕಿದೆ.