ಚಾಮರಾಜನಗರ: ಕಳೆದ ನಾಲ್ಕೈದು ದಿನಗಳಿಂದ ಮಂಡ್ಯ ಸಂಸದೆ ಸುಮಲತಾ ಮತ್ತು ಜೆಡಿಎಸ್ ನಾಯಕರ ನಡುವೆ ನಡೆಯುತ್ತಿರುವ ಜಟಾಪಟಿ ಮೊದಲು ನಿಲ್ಲಲಿ. ಇದು ಅವಶ್ಯಕತೆಯೇ ಇಲ್ಲವೆಂದು ಕಾಂಗ್ರೆಸ್ ಮುಖಂಡ ಎನ್.ಚೆಲುವರಾಯಸ್ವಾಮಿ ಹೇಳಿದರು.
ಚಾಮರಾಜನಗರದಲ್ಲಿ ಬೆಲೆ ಏರಿಕೆ ಖಂಡಿಸಿ ನಡೆಯುತ್ತಿರುವ ಸೈಕಲ್ ಜಾಥಾ ಉದ್ಘಾಟಿಸಿ ಅವರು ಮಾತನಾಡಿದ ಅವರು, ಜನಪ್ರತಿನಿಧಿಗಳಾದವರೂ ಬೀದಿಯಲ್ಲಿ ಜಗಳ ಆಡುವುದು ಸೂಕ್ತವಲ್ಲ. ಅಕ್ರಮ ಗಣಿಗಾರಿಕೆ ಬಗ್ಗೆ ತನಖೆ ನಡೆಸಿ ಸೂಕ್ತ ಕ್ರಮ ವಹಿಸಲಿ. ಜೊತೆಗೆ, ಕೆಆರ್ಎಸ್ ಆಣೆಕಟ್ಟು ಬಿರುಕು ಬಿಟ್ಟಿದೆ ಎನ್ನುವ ಬಗ್ಗೆಯೂ ಪರಾಮರ್ಶಿಸಲಿ. ಅವರವರ ವೈಫಲ್ಯ, ತಪ್ಪುಗಳನ್ನು ಮುಚ್ಚಿಹಾಕಿಕೊಳ್ಳಲು ಈ ರೀತಿ ಜಗಳವಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಮನ್ ಮುಲ್ ವಿಚಾರ ಇದೆ. ಮೈ ಶುಗರ್ ಆರಂಭದಂತ ಗಂಭೀರ ವಿಚಾರಗಳನ್ನು ಬಿಟ್ಟು ನನ್ನ ಶಕ್ತಿ ಇಷ್ಟು, ಅವರ ಶಕ್ತಿ ಇಷ್ಟು ಎಂಬ ರೀತಿ ಮಾತನಾಡುತ್ತಿದ್ದಾರೆ. ಇಷ್ಟು ಕಾಳಜಿ ಇರುವವರು ಎರಡು ಮೂರು ತಿಂಗಳುಗಳಿಂದ ಕೋವಿಡ್ ಕಾಲದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ಏಕೆ ಸಹಾಯ ಮಾಡಲಿಲ್ಲ. ಅವಾಗ ಇವರೆಲ್ಲ ಎಲ್ಲಿದ್ದರು?. ರವೀಂದ್ರ ಶ್ರೀಕಂಠಯ್ಯ ಅವರು ಇದೇ ರೀತಿ ರಾಜಕಾರಣ ಮಾಡಿಕೊಂಡು ಬಂದವರು. ಸಣ್ಣ ವಿಚಾರಗಳನ್ನಿಟ್ಟುಕೊಂಡು ಜನರನ್ನು ಡೈವರ್ಟ್ ಮಾಡುವವರು. ಇದರಲ್ಲಿ ಹೆಚ್ಡಿಕೆ ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ನಂಗೆಲ್ಲ ಗೊತ್ತಿದೆ ಎನ್ನುವುದು ಬಿಡಲಿ:
ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಚೆಲುವರಾಯಸ್ವಾಮಿ ಅವರಿಗೆ ಯಾವುದೂ ಗೊತ್ತಿಲ್ಲ. ಆದ್ರೆ ಎಲ್ಲವೂ ಗೊತ್ತಿದೆ ಎನ್ನುತ್ತಾರೆ. ತಮಗೆ ಗೊತ್ತಿಲ್ಲ ಎಂದು ಅವರು ಹೇಳಲ್ಲ. ಹಿಟ್ ಆ್ಯಂಡ್ ರನ್ ರೀತಿ ಹೇಳಿಕೆ ಕೊಟ್ಟು ಹೋಗುತ್ತಾರೆ. ಆ ಸಿಡಿ ಇದೆ, ಈ ಸಿಡಿ ಎನ್ನುವ ಬದಲು ಸಿಡಿ ಬಿಡುಗಡೆ ಮಾಡಿ ತೋರಿಸಲಿ. ಜನರು ತೀರ್ಮಾನಿಸುತ್ತಾರೆ. ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ, ಜೆ.ಹೆಚ್.ಪಟೇಲ್ ಅವರಿಗೆ ಸಾರ್ವಜನಿಕ ಹಿತಾಸಕ್ತಿ ಇತ್ತು. ಕುಮಾರಸ್ವಾಮಿ ಅವರಿಗೆ ಅದು ಇಲ್ಲವೆಂದು ಚೆಲುವರಾಯಸ್ವಾಮಿ ಕುಟುಕಿದರು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣರನ್ನು ನೋಡಿ ಕುಮಾರಸ್ವಾಮಿ ಕಲಿಯುವುದು ಬಹಳಷ್ಟಿದೆ: ಸುಮಲತಾ