ಚಾಮರಾಜನಗರ: ವನ್ಯ ಸಂಪತ್ತು, ನೈಸರ್ಗಿಕ ಸಮತೋಲನದ ಪ್ರತೀಕವಾಗಿರುವ ಹುಲಿ ಸಂತತಿ ಜಿಲ್ಲೆಯಲ್ಲಿ ವೃದ್ಧಿಯಾಗುತ್ತಿದ್ದು ಮೂರು ಟೈಗರ್ ರಿಸರ್ವ್ ಹೊಂದಿದ್ದ ದೇಶದ ಏಕೈಕ ಜಿಲ್ಲೆಯಾಗುತ್ತಿದೆ ಚಾಮರಾಜನಗರ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಜೊತೆ ಮಲೆಮಹದೇಶ್ವರ ವನ್ಯಜೀವಿಧಾಮವೂ ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆಯಾಗುತ್ತಿದೆ.
ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಎನ್ಟಿಸಿಎ(NTCA) ಅನುಮೋದನೆಯನ್ನು ಉಲ್ಲೇಖಿಸಿ ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಎಫ್ಒ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಇನ್ನೊಂದು ವಾರದಲ್ಲಿ ಸರ್ಕಾರದಿಂದ ಅಧಿಸೂಚನೆ ಪ್ರಕಟಗೊಳ್ಳಲಿದೆ.
ವನ್ಯಧಾಮ ಎಂದು ಘೋಷಣೆಯಾದ 8 ವರ್ಷಗಳ ಬಳಿಕ ಹುಲಿ ಸಂರಕ್ಷಿತ ಪ್ರದೇಶ
1,224 ಚದರ ಕಿ.ಮೀ. ಪ್ರಾದೇಶಿಕ ಅರಣ್ಯದ ಪೈಕಿ 906.18 ಚದರ ಕಿ.ಮೀ ಪ್ರದೇಶವನ್ನು 2013ರಲ್ಲಿ ಮಲೆಮಹದೇಶ್ವರ ವನ್ಯಧಾಮ ಎಂದು ಘೋಷಿಸಲಾಗಿತ್ತು. ವರ್ಷದಿಂದ ವರ್ಷಕ್ಕೆ ಅರಣ್ಯದಲ್ಲಿ ವ್ಯಾಘ್ರಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅರಣ್ಯ ಇಲಾಖೆಯು 2018ರಲ್ಲಿ ಈ ವನ್ಯಧಾಮವನ್ನೂ ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಲು ಪ್ರಯತ್ನ ಆರಂಭಿಸಿತ್ತು. ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವವನ್ನೂ ಸಲ್ಲಿಸಿತ್ತು. ವನ್ಯಧಾಮ ಎಂದು ಘೋಷಣೆಯಾದ ಎಂಟು ವರ್ಷಗಳ ಬಳಿಕ ಹುಲಿ ಸಂರಕ್ಷಿತ ಪ್ರದೇಶವಾಗಿ ಬದಲಾಗುತ್ತಿದೆ. 2012 ರಲ್ಲಿ ಸ್ವಾಭಾವಿಕವಾಗಿ ಮೃತಪಟ್ಟ ಹುಲಿ ಕಳೇಬರ ಪತ್ತೆಯಾಗಿತ್ತು. ಅದಾದ ಬಳಿಕ 2018 ರಲ್ಲಿ ಹುಲಿ ಮರಿಗಳು, ಹುಲಿಗಳು ಗಣತಿ ಕ್ಯಾಮರಾಗೆ ಸೆರೆಯಾಗಿವೆ, ಸದ್ಯ 20-25 ಹುಲಿಗಳು ವನ್ಯಜೀವಿ ಧಾಮದಲ್ಲಿವೆ ಎಂದು ಅಂದಾಜಿಸಲಾಗಿದೆ.ಹುಲಿ ಸಂರಕ್ಷಿತ ಪ್ರದೇಶ ಘೋಷಣೆಯಾದ ಬಳಿಕ ಜಿಲ್ಲೆಯೊಂದರಲ್ಲೇ ಮೂರು ಟೈಗರ್ ರಿಸರ್ವ್ ಇರುವ ಭಾರತದ ಏಕೈಕ ಜಿಲ್ಲೆಯಾಗಿ ಚಾಮರಾಜನಗರ ಹೊರಹೊಮ್ಮಲಿದೆ.
ಹುಲಿ ಗಣತಿಯಲ್ಲಿ ನಂ1 ಸ್ಥಾನದ ನಿರೀಕ್ಷೆ:
ಕಳೆದ ಬಾರಿ ನಡೆದ ಹುಲಿ ಗಣತಿಯಲ್ಲಿ ಎರಡು ಹುಲಿಗಳ ಸಂಖ್ಯೆ ಕಡಿಮೆಯಾಗಿ ಎರಡನೇ ಸ್ಥಾನ ಪಡೆದುಕೊಂಡಿದ್ದ ಕರ್ನಾಟಕ ರಾಜ್ಯ, 2022ರಲ್ಲಿ ನಡೆಯುವ ಹುಲಿ ಗಣತಿಯಲ್ಲಿ ಪ್ರಥಮ ಸ್ಥಾನಗಳಿಸುವ ವಿಶ್ವಾಸದಲ್ಲಿದೆ. 2018ರ ಹುಲಿ ಗಣತಿ ಪ್ರಕಾರ ಮಧ್ಯಪ್ರದೇಶ 526 ಹುಲಿಗಳನ್ನು ಹೊಂದುವ ಮೂಲಕ ದೇಶದಲ್ಲೇ ಮೊದಲ ಸ್ಥಾನಪಡೆದರೆ, ಕರ್ನಾಟಕ 524 ಹುಲಿಗಳನ್ನು ಹೊಂದುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿ ಪಡೆಬೇಕಾಯಿತು.
ಬಂಡೀಪುರ, ನಾಗರಹೊಳೆ,ಬಿಆರ್ಟಿ, ಭದ್ರಾ ಹಾಗೂ ಕಾಳಿ ಎನ್ನುವ ರಾಜ್ಯದ ಐದು ಹುಲಿ ಸಂರಕ್ಷಿತಾರಣ್ಯ ಪ್ರದೇಶದ ವ್ಯಾಪ್ತಿಗೆ ಮಲೆ ಮಹದೇಶ್ವರಬೆಟ್ಟ ವನ್ಯಜೀವಿ ವಿಭಾಗ ಎನ್ನುವ ನೂತನ ಹುಲಿ ಸಂರಕ್ಷಿತಾರಣ್ಯ ಪ್ರದೇಶ ಆರನೇಯದಾಗಿ ಸೇರ್ಪಡೆಗೊಳ್ಳುತ್ತಿದ್ದು ಹುಲಿ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿರುವ ವಿಶ್ವಾಸ ಅಧಿಕಾರಿಗಳಲ್ಲಿ ವ್ಯಕ್ತವಾಗಿದ್ದು ಮೇಲ್ನೋಟಕ್ಕೆ 250ಕ್ಕೂ ಹೆಚ್ಚು ಹುಲಿಗಳಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2018ರ ಹುಲಿ ಗಣತಿ ವೇಳೆ ಸುಮಾರು 1020 ಚ.ಕಿ.ಮೀ ವಿಸ್ತಾರ ವಿರುವ ಬಂಡೀಪುರ ಅರಣ್ಯದಲ್ಲಿ 128 ಹುಲಿಗಳು ಪತ್ತೆಯಾಗಿದ್ದವು. ಬಂಡೀಪುರದಲ್ಲಿ ಹುಲಿಗಳ ಸಂತತಿಗೆ ಹಾಗೂ ರಕ್ಷಣೆಗೆ ಹೆಚ್ಚು ಹೊತ್ತು ನೀಡಿರುವ ಪರಿಣಾಮ ಸದ್ಯಕ್ಕೆ ಸುಮಾರು 185 ಹುಲಿಗಳಿರುವುದು ತಿಳಿದು ಬಂದಿದೆ. 572 ಚ.ಕಿ.ಮೀ ವಿಸ್ತಾರ ವಿರುವ ಬಿಆರ್ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಹುಲಿ ಗಣತಿ ವೇಳೆ 70ಕ್ಕೂ ಹೆಚ್ಚು ಹುಲಿಗಳು ಪತ್ತೆಯಾಗಿವೆ. ಇದರ ಜೊತೆಗೆ 920 ಚ.ಕಿ.ಮೀ ವಿಸ್ತಾರದಲ್ಲಿರುವ ನೂತನ ಹುಲಿ ಸಂರಕ್ಷಿತಾರಣ್ಯ ಪ್ರದೇಶವಾದ ಮಲೆ ಮಹದೇಶ್ವರಬೆಟ್ಟದಲ್ಲಿ ಗಣತಿ ವೇಳೆ 20 ಹುಲಿಗಳು ಪತ್ತೆಯಾಗಿವೆ.
ಬಂಡೀಪುರದಲ್ಲಿ ಒಟ್ಟು 185 ಹುಲಿಗಳು ಪತ್ತೆ:
2019ರಲ್ಲಿ ಇಲಾಖೆ ನಡೆಸಿದ ಹುಲಿ ಗಣತಿಯಲ್ಲಿ ಬಂಡೀಪುರ ಒಂದರಲ್ಲೇ 148 ಹುಲಿಗಳು ಪತ್ತೆಯಾಗಿವೆ. ಅಲ್ಲದೆ ಪಕ್ಕದ ಅರಣ್ಯಗಳಾದ ಮದುಮಲೈ ಹಾಗೂ ವೈನಾಡು ಅರಣ್ಯಗಳಿಂದ ಬಂದು ಹೋಗುವ ಹುಲಿಗಳಿಂದಾಗಿ ಬಂಡೀಪುರದಲ್ಲಿ ಒಟ್ಟು 185 ಹುಲಿಗಳು ಪತ್ತೆಯಾಗಿವೆ ಎನ್ನುತ್ತಾರೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಸಿಎಫ್ ನಟೇಶ್.
2018ರಲ್ಲಿ ನಡೆದ ಹುಲಿ ಗಣತಿಯಲ್ಲಿ ಎರಡು ಹುಲಿಗಳ ಸಂಖ್ಯೆ ಕಡಿಮೆಯಾಗಿ ಕರ್ನಾಟಕ ರಾಜ್ಯಕ್ಕೆ ಎರಡನೇ ಸ್ಥಾನ ಸಿಕ್ಕಿತು. ಹೀಗಾಗಿ ಹಿಂದೆ ಆದ ತಪ್ಪುಗಳು ಮರುಕಳಿಸದಂತೆ ಕ್ರಮಕೈಗೊಳ್ಳಲು ಇಲಾಖೆ ಸೂಚಿಸಿದೆ. ಆ ತಪ್ಪುಗಳನ್ನು ಸರಿಪಡಿಸಿಕೊಂಡು ಹುಲಿ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿ ಬರುತ್ತೇವೆ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಾರೆ ಅಧಿಕಾರಿಗಳು.