ಚಾಮರಾಜನಗರ: ಲಸಿಕೆ ಹಾಹಾಕಾರದ ನಡುವೆ ಚಾಮರಾಜನಗರ ಜಿಲ್ಲೆಗೆ ಇಂದು 10 ಸಾವಿರ ಡೋಸ್ ಲಸಿಕೆ ಬಂದಿದ್ದು, ಎರಡನೇ ಡೋಸ್ ಪಡೆಯುವವರಿಗಷ್ಟೇ ವಿತರಣೆಯಾಗಲಿದೆ.
ಇಂದು ಸಂಜೆ 5 ಸಾವಿರ ಡೋಸ್ ಕೋವಿಶೀಲ್ಡ್ ಮತ್ತು 5 ಸಾವಿರ ಡೋಸ್ ಕೋವ್ಯಾಕ್ಸಿನ್ ಲಸಿಕೆ ಬಂದಿದ್ದು, ಸರಿಸುಮಾರು 22 ಸಾವಿರ ಮಂದಿ ಕೋವ್ಯಾಕ್ಸಿನ್ನ ಮೊದಲನೆ ಡೋಸ್ ಪಡೆದುಕೊಂಡಿರುವುದರಿಂದ ಸಮರ್ಪಕ ಪೂರೈಕೆಯಾಗದಿದ್ದಲ್ಲಿ ಜಿಲ್ಲೆಯಲ್ಲಿ ಮತ್ತೆ ಲಸಿಕೆ ಅಭಾವ ಸೃಷ್ಟಿಯಾಗಲಿದೆ.
ಜಿಲ್ಲೆಯಲ್ಲಿ ಮೂರು ದಿನಗಳ ಹಿಂದೆಯೇ ಕೋವ್ಯಾಕ್ಸಿನ್ ಲಸಿಕೆ ಖಾಲಿಯಾಗಿದ್ದರೂ, ಜಿಲ್ಲಾ ಆರೋಗ್ಯ ಇಲಾಖೆಯು ಸರಿಯಾದ ಮಾಹಿತಿ ನೀಡದ ಪರಿಣಾಮ ನಾಗರಿಕರು ಲಾಕ್‌ಡೌನ್ ನಡುವೆ ಲಸಿಕಾ ಕೇಂದ್ರಗಳಿಗೆ ಅಲೆದಾಡಿದ ಘಟನೆಗಳು ನಡೆದಿದೆ. ಲಸಿಕೆ ಕೊರತೆ ಹಿನ್ನೆಲೆ ಇಂದು 60 ಮಂದಿಗೆ ಮೊದಲನೇ ಡೋಸ್ ಸೇರಿ ಒಟ್ಟು 433 ಮಂದಿಗಷ್ಟೇ ಲಸಿಕೆ ವಿತರಿಸಲಾಗಿದೆ.
ಆರೋಗ್ಯ ಇಲಾಖೆಯ ಕೊವಿನ್ ಅಪ್ಲಿಕೇಷನ್‌ನಲ್ಲಿ ಜಿಲ್ಲೆಯ ಪಣ್ಯದಹುಂಡಿ ಸಮುದಾಯ ಆರೋಗ್ಯ ಕೇಂದ್ರ, ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆ, ನಗರ ಆರೋಗ್ಯ ಕೇಂದ್ರದಲ್ಲಿ ಕೋವ್ಯಾಕ್ಸಿನ್ ದಾಸ್ತಾನಿದೆ ಎಂಬ ಮಾಹಿತಿ ತೋರಿಸುತ್ತಿದ್ದು, ಈ ಮಾಹಿತಿ ಆಧಾರದ ಮೇಲೆ ದೂರದ ಊರುಗಳಿಂದ ಕೇಂದ್ರಕ್ಕೆ ಹೋದ ನಾಗರಿಕರು ಲಸಿಕೆ ಇಲ್ಲದೇ ಬರಿಗೈಯಲ್ಲಿ ವಾಪಸ್ ಬಂದಿರುವುದಾಗಿ ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆ ಗ್ರಾಮದ ಮಧು ಎಂಬವರು ಈಟಿವಿ ಭಾರತಕ್ಕೆ ಮಾಹಿತಿ ಹಂಚಿಕೊಂಡು ಕಿಡಿಕಾರಿದರು. ಲಸಿಕೆ ಬಂದಿದ್ದು ಸಮರ್ಪಕವಾಗಿ ಪೂರೈಕೆಯಾಗದಿದ್ದರೇ ಮತ್ತೇ ಎರಡನೇ ಡೋಸ್ ಗೆ ಜನರು ಅಲೆದಾಡುವ ಸ್ಥಿತಿ ಮತ್ತೆ ನಿರ್ಮಾಣವಾಗಲಿದೆ.