ಚಾಮರಾಜನಗರ: ಮಂತ್ರಾಲಯದ ಗುರುರಾಯರು ಕಲಿಯುಗದ ಕಾಮಧೇನು ಎಂಬುದೇ ಭಕ್ತರ ನಂಬಿಕೆ. ವರನಟ ಡಾ.ರಾಜ್ ಅವರು ಕೂಡ ರಾಘವೇಂದ್ರ ಶ್ರೀಗಳ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿ ಗಮನ ಸೆಳೆದಿದ್ದು ನಿಮಗೆ ಗೊತ್ತೇ ಇದೆ. ಆದರೆ ಅವರು ಅಭಿಮಾನಿಯೊಬ್ಬರಿಗೆ ಮಂತ್ರಾಲಯದ ಹಾದಿ ತೋರಿದ ಕಥೆ ಬಲು ರೋಚಕವಾಗಿದೆ.
1995ರ ಒಂದು ಮಧ್ಯಾಹ್ನ ಚಾಮರಾಜನಗರದ ಹರಳುಕೋಟೆ ಜನಾರ್ಧನಸ್ವಾಮಿಯ ಅರ್ಚಕರಾಗಿದ್ದ ಅನಂತಪ್ರಸಾದ್, ಡಾ.ರಾಜಕುಮಾರ್ ಅವರು ಹುಟ್ಟೂರು ಗಾಜನೂರಿಗೆ ಬಂದ ವಿಚಾರ ತಿಳಿದು ಭೇಟಿ ಮಾಡಲು ತೆರಳುತ್ತಾರೆ. ಭೇಟಿಯೂ ಆಗಿ ಅಣ್ಣಾವ್ರೊಂದಿಗೆ ಮಾತನಾಡುತ್ತಿದ್ದ ವೇಳೆ ರಾಯರ ಸನ್ನಿಧಾನಕ್ಕೆ ಹೋಗಿದ್ದೀರಾ..? ಎಂದು ಕೇಳಿದ್ದಕ್ಕೆ ಅನಂತಪ್ರಸಾದ್ ಇಲ್ಲಾ, ಎನ್ನುತ್ತಾರೆ. ಅದಕ್ಕೆ, ಅಣ್ಣಾವ್ರು ಅಚ್ಚರಿ ವ್ಯಕ್ತಪಡಿಸಿ " ಗಂಧದ ಬ್ರಾಹ್ಮಣರು, ರಾಘವೇಂದ್ರ ಸ್ವಾಮಿಗಳನ್ನು ನೋಡದಿದ್ದರೇ ಹೇಗೆ..!?, ಎಂದು ಪ್ರಶ್ನಿಸಿ ಬಸ್ ನ ಮಾರ್ಗವನ್ನೆಲ್ಲಾ ತಿಳಿಸಿದ್ರು. ರಾಯರ ದರ್ಶನ ಮಾಡಿ ಎಲ್ಲಾ ಒಳ್ಳೆಯಾದಗಲಿದೆ ಎಂದು ಉಭಯ ಕುಶಲೋಪರಿ ವಿಚಾರಿಸಿ ಕಳುಹಿಸುತ್ತಾರೆ.
ಅಣ್ಣಾವ್ರ ಕಟ್ಟಾ ಅಭಿಮಾನಿಯಾಗಿದ್ದ ಅನಂತಪ್ರಸಾದ್ ಕೆಲವು ದಿನಗಳ ಬಳಿಕ ರಾಯರ ದರ್ಶನ ಮಾಡಿ ಬರುತ್ತಾರೆ. ಇಲ್ಲಿಯವರೆಗೆ 40 ಕ್ಕೂ ಹೆಚ್ಚು ಸಲ ಮಂತ್ರಾಲಯಕ್ಕೆ ಹೋಗಿಬಂದಿರುವ ಯಾರಾದರೂ ಮಂತ್ರಾಲಯ ಹೋಗದಿರುವರಿದ್ದರೇ ಅವರನ್ನು ರಾಯರ ದರ್ಶನ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ 150 ಕ್ಕೂ ಹೆಚ್ಚು ಮಂದಿಗೆ ರಾಯರ ದರ್ಶನ ಮಾಡಿಸಿದ್ದಾರೆ.
ಅಣ್ಣಾವ್ರ ಜನ್ಮದಿನವಾದ ಇಂದು ಅನಂತಪ್ರಸಾದ್ ಮಾತನಾಡಿ, ಅವರು ಮಾಡದ ಪಾತ್ರವಿರಲಿಲ್ಲ, ಎಷ್ಟೋ ಬ್ರಾಹ್ಮಣ ಮಂದಿಗೆ ಶ್ಲೋಕಗಳು ಬರುವುದಿಲ್ಲ. ಆದರೆ ಡಾ. ರಾಜ್ಕುಮಾರ್ ಅವರು ಸ್ಪಷ್ಟವಾಗಿ ಮಂತ್ರ ಪಠಿಸುತ್ತಿದ್ದರು. ರಾಜ್ ಕುಮಾರ್ ಅವರೊಬ್ಬರೇ ವಿಶ್ವಕ್ಕೆ ಕಲಾತಪಸ್ವಿ, ಇಂದಿಗೂ ನನ್ನ ಮಕ್ಕಳಿಗೆ ರಾಯರ ಪವಾಡಗಳು, ಅಣ್ಣಾವ್ರು ತನ್ನನ್ನು ಮಂತ್ರಾಲಯಕ್ಕೆ ಕಳುಹಿಸಿದ್ದರ ಬಗ್ಗೆ ಹೇಳುತ್ತಿರುತ್ತೇನೆ ಎಂದರು.
ಓದಿ : ಬೆಂಗಳೂರಲ್ಲಿ ತಡರಾತ್ರಿ ವರುಣನ ಆರ್ಭಟ; ಕೆಲವೆಡೆ ರಸ್ತೆಗಳು ಸಂಪೂರ್ಣ ಜಲಾವೃತ!