ಚಾಮರಾಜನಗರ : ಇಂದಿನಿಂದ ಜಿಲ್ಲೆಯಲ್ಲಿ 3ನೇ ಹಂತದ ಕೋವಿಡ್ ಲಸಿಕೆ ಅಭಿಯಾನ ಆರಂಭವಾಗಲಿದೆ. 60 ವರ್ಷ ಮೇಲ್ಪಟ್ಟ ಹಿರಿಯರು, ಗಂಭೀರ ಆರೋಗ್ಯ ಸಮಸ್ಯೆ ಇರುವ 45 ವರ್ಷ ಮೇಲ್ಪಟ್ಟವರು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ಪಡೆಯಬಹುದು.
ಖಾಸಗಿ ಆಸ್ಪತ್ರೆಯಲ್ಲಿ 250 ರೂ. ನೀಡಿ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆ, ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಾದ ಚಾಮರಾಜನಗರದ ಜೆಎಸ್‌ಎಸ್ ಆಸ್ಪತ್ರೆ, ಕೊಳ್ಳೇಗಾಲ ತಾಲೂಕಿನ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಹಣ ಕೊಟ್ಟು ಲಸಿಕೆ ಪಡೆಯಬೇಕು.
ಲಸಿಕೆ ಪಡೆಯುವವರು ಕಡ್ಡಾಯವಾಗಿ ಆನ್‍ಲೈನ್ ಅಥವಾ ಆಫ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಕೋವಿನ್ 2.0 ಅಪ್ಲಿಕೇಶನ್ ಮೂಲಕ ಅಥವಾ ಆರೋಗ್ಯ ಸೇತು ಇಲ್ಲವೇ ಇತರೇ ಐಟಿ ಅಪ್ಲಿಕೇಶನ್ ಮೂಲಕ ಸ್ವಯಂ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆನ್‍ಲೈನ್ ನೋಂದಣಿ ಮಾಡದ ಫಲಾನುಭವಿಗಳು ಗುರುತಿಸಲಾಗಿರುವ ಲಸಿಕಾ ಕೇಂದ್ರಗಳು ಅಂದರೆ ಆಸ್ಪತ್ರೆಗಳಿಗೆ ನೇರವಾಗಿ ಬಂದು ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಡಿಸಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ವಾರದಲ್ಲಿ 4 ದಿನ ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರಗಳಂದು ಲಸಿಕೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ವಾರದ ಎಲ್ಲಾ ದಿನಗಳಂದು ಲಸಿಕೆ ನೀಡಲಾಗುತ್ತದೆ. ಮಧ್ಯಾಹ್ನ 12 ರಿಂದ ಸಂಜೆ 5ಗಂಟೆಯವರೆಗೆ ಲಸಿಕೆ ನೀಡಲಲಾಗುತ್ತಿದೆ.
ಪ್ರತಿ ಲಸಿಕಾ ಕೇಂದ್ರದಲ್ಲಿ 200 ಫಲಾನುಭವಿಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಿದ್ದು, ಆನ್‍ಲೈನ್‍ನಲ್ಲಿ ನೋಂದಾಯಿಸಿ ಕೊಂಡವರಿಗೆ ನಿಗದಿತ ಸಮಯದಲ್ಲಿ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೊರೊನಾ ಏರುಗತಿ : ಕಳೆದ 4 ದಿನಗಳ ಹಿಂದೆಯಷ್ಟೇ ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 5 ಇದ್ದದ್ದು ಬಳಿಕ 9, 12 ಭಾನುವಾರದ ಹೊತ್ತಿಗೆ 15ಕ್ಕೆ ಏರಿಕೆಯಾಗಿದೆ.