ಚಾಮರಾಜನಗರ: ಜಿಲ್ಲಾದ್ಯಂತ ನಾಳೆಯಿಂದ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಹಿನ್ನೆಲೆ ಮದ್ಯ ಖರೀದಿಸಲು ಮದ್ಯಪ್ರಿಯರು ಮದ್ಯದಂಗಡಿ ಮುಂದೆ ಮುಗಿಬಿದ್ದ ಘಟನೆ ನಡೆಯಿತು.
4 ದಿನಗಳ ಬಂದ್ ಹಿನ್ನೆಲೆ ಎಣ್ಣೆ ಶೇಖರಿಸಲು ಕ್ಯೂ ನಿಂತ ಮದ್ಯಪ್ರಿಯರು ಬ್ಯಾಗ್, ಕವರ್ಗಳಲ್ಲಿ ತಮ್ಮಿಷ್ಟದ ಮದ್ಯ ತುಂಬಿಸಿಕೊಂಡು ಕೊಂಡೊಯ್ದರು. ಕಳೆದ ಮೂರು ದಿನಗಳಿಂದ ವ್ಯಾಪಾರವಿಲ್ಲದೆ ಕಂಗೆಟ್ಟಿದ್ದ ಮದ್ಯದಂಗಡಿ ಮಾಲೀಕರು ಇಂದು ಸ್ವಲ್ಪ ಆದಾಯ ಕಂಡುಕೊಂಡರು. ಬೆಳಗ್ಗೆ 8 ಗಂಟೆ ಆಗುತ್ತಿದ್ದಂತೆ ವೈನ್ ಸ್ಟೋರ್, ಎಂಎಸ್ಐಎಲ್ ಅಂಗಡಿಗಳಿಗೆ ಧಾವಿಸಿ ಬಂದ ಯುವಕರು, ಹಿರಿಯರು ಮದ್ಯ ಖರೀದಿಸಿ ಕೊಂಡೊಯ್ದಿದ್ದಾರೆ.
ದಿನಸಿ, ಅಗತ್ಯ ವಸ್ತುಗಳ ಖರೀದಿ-ನಿಯಮ ಮಾಯ:
ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಮೂರು ದಿನಗಳವರೆಗೆ ಅವಕಾಶ, ನಾಲ್ಕು ದಿನ ಸಂಪೂರ್ಣ ಲಾಕ್ಡೌನ್ ನಿಯಮ ರೂಪಿಸಿರುವುದರಿಂದ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ಅಗತ್ಯ ವಸ್ತುಗಳ ಖರೀದಿಗೆ ಅಂಗಡಿಗಳ ಮುಂದೆ ಜಮಾಯಿಸಿದ ಜನರು, ಸಾಮಾಜಿಕ ಅಂತರವನ್ನೇ ಮರೆತು ಗುಂಪು ಗುಂಪಾಗಿ ನಿಂತರು. ಕೆಲವು ಅಂಗಡಿಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದರು. ಸೋಂಕು ನಿಯಂತ್ರಣಕ್ಕೆ ವಾರದಲ್ಲಿ 4 ದಿನ ಸಂಪೂರ್ಣ ಲಾಕ್ಡೌನ್, 3 ದಿನ ಸಡಿಲಿಕೆ ಮಾಡಿದ್ದು, ಜನಜಾತ್ರೆ ನೋಡಿದರೆ ಆ ನಿಯಮ ಫಲಪ್ರದವಾಗುವುದು ಅನುಮಾನವೆಂಬಂತೆ ಕಾಣುತ್ತಿದೆ.
ಇದನ್ನೂ ಓದಿ: ಅಗತ್ಯ ವಸ್ತುಗಳ ಖರೀದಿಗೆ ರಾಯಚೂರಿನ ಮಾರುಕಟ್ಟೆಗಳಲ್ಲಿ ಜನಜಂಗುಳಿ