ಚಾಮರಾಜನಗರ: ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದ ಜಿಲ್ಲಾಧಿಕಾರಿ ನಡೆ-ಹಳ್ಳಿ ಕಡೆ ಕಾರ್ಯಕ್ರಮ ಮತ್ತೆ ಆರಂಭಗೊಂಡಿದ್ದು, ಇಂದು ಚಾಮರಾಜನಗರ ಡಿಸಿ ಡಾ.ಎಂ.ಆರ್.ರವಿ ಸಂತೇಮರಹಳ್ಳಿ ಹೋಬಳಿಯ ಬಾಗಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದಾರೆ.
ಜಿಲ್ಲಾಧಿಕಾರಿಗಳ ಆಗಮನದಿಂದ ಸಂತೋಷಗೊಂಡ ಗ್ರಾಮಸ್ಥರು ಎತ್ತಿನಗಾಡಿ ಅಲಂಕರಿಸಿ, ಮಂಗಳವಾದ್ಯದೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ಮಾಡಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಎಸಿ ದಿಲೀಪ್ ಬದೋಲೆ, ಡಿಎಚ್ಒ ಡಾ.ಎಂ.ವಿಶ್ವೇಶ್ವರಯ್ಯ ಅವರಿಗೆ ಸ್ವಾಗತ ಕೋರಿದರು.
ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಅಹವಾಲು ಆಲಿಕೆ ವೇಳೆ ಗ್ರಾಮಸ್ಥರು ದೂರಿನ ಸುರಿಮಳೆಗೈದರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ಸಿಗದ ವೈದ್ಯರು, ನಿಯಂತ್ರಿಸಲಾಗದ ಕಾಡುಹಂದಿ ಹಾವಳಿ, ಕಿರಿದಾದ ಸೇತುವೆಯಿಂದ ಆಗುತ್ತಿರುವ ಅನಾನುಕೂಲ, ಸಮರ್ಪಕವಾಗಿ ಇಲ್ಲದ ಬಸ್ ವ್ಯವಸ್ಥೆ ಸೇರಿದಂತೆ ಹತ್ತಾರು ದೂರುಗಳನ್ನು ಡಿಸಿಗೆ ಸಲ್ಲಿಸಿದರು.
ಗ್ರಾಮಸ್ಥರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ ಶೀಘ್ರವೇ ಸೂಕ್ತ ಕ್ರಮ ಕೈಗೊಂಡು ಪರಿಹಾರ ದೊರಕಿಸುವ ಭರವಸೆ ನೀಡಿದರು.