ಚಾಮರಾಜನಗರ : ಒಂದೇ ರಾತ್ರಿ 14 ಮಂದಿ ಮೃತಪಟ್ಟ ಹಿನ್ನೆಲೆ ಚಾಮರಾಜನಗರ ಜಿಲ್ಲಾಕೇಂದ್ರದಲ್ಲಿ ಇದೇ ಮೊದಲ ಬಾರಿಗೆ ಪೊಲೀಸರ ಹಸ್ತಕ್ಷೇಪವಿಲ್ಲದ ಜನತಾ ಕರ್ಫ್ಯೂ ಜಾರಿಯಾಗಿದೆ.
ಈವರೆಗೂ ಇದ್ದ ಕರ್ಫ್ಯೂನಲ್ಲಿ ಅನಗತ್ಯ ಸಂಚಾರ ತಡೆಯಲು ಪೊಲೀಸರು ಹರಸಾಹಸ ಪಡಬೇಕಿತ್ತು. ಮಧ್ಯಾಹ್ನ 12 ಆಗುತ್ತಿದ್ದಂತೆ ಪೊಲೀಸರು ಸೈರನ್ ಮೊಳಗಿಸಿ ಅಂಗಡಿಗಳನ್ನು ಬಂದ್ ಮಾಡಿಸಬೇಕಿತ್ತು.
ಆದರೆ, ಇಂದು 11 ಆಗುತ್ತಿದ್ದಂತೆ ಸ್ವಯಂ ಪ್ರೇರಣೆಯಿಂದ ಅಂಗಡಿಗಳು ಬಂದ್ ಆಗಿವೆ. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜನ ಎಚ್ಚೆತ್ತುಕೊಂಡಿದ್ದಾರೆ.
ಭುವನೇಶ್ವರಿ ವೃತ್ತಕ್ಕೆ ಪೊಲೀಸರ ಭಯದಿಂದಾಗಿ ಜನ ಬಾರದಿದ್ದರೂ ಅಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಎಲ್ಐಸಿ ಕಚೇರಿ ಭಾಗಗಳಲ್ಲಿ ಜನರು ಇದ್ದೇ ಇರುತ್ತಿದ್ದರು.
ಆದರೆ, ಇಂದು ಮಾತ್ರ ಎಲ್ಲಾ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಚಾಮರಾಜನಗರ ಜಿಲ್ಲಾಸ್ಪತ್ರೆಯ ಮೃತ್ಯು ಕೇಕೆಗೆ ಜನರು ಎಚ್ಚೆತ್ತುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.