ಚಾಮರಾಜನಗರ: ಜಿಲ್ಲಾಡಳಿತದ ವತಿಯಿಂದ ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವಮಾನವ ದಿನ ಕಾರ್ಯಕ್ರಮಕ್ಕೆ ಡಿಸಿ, ಎಸ್ಪಿ ಹಾಗೂ ಸಿಇಒ ಯಾರೂ ಬರದಿದ್ದಕ್ಕೆ ಆಕ್ರೋಶ ವ್ಯಕ್ತವಾಯಿತು.
ಮೂವರು ಉನ್ನತಾಧಿಕಾರಿಗಳ ಅನುಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಎಡಿಸಿ ಕಾತ್ಯಾಯಿನಿದೇವಿ ಚಾಲನೆ ಕೊಡಲು ಮುಂದಾಗುತ್ತಿದ್ದಂತೆ ಕನ್ನಡಪರ ಹೋರಾಟಗಾರರು ವೇದಿಕೆ ಮುಂಭಾಗ ಕುಳಿತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಎಸ್ಪಿ ದಿವ್ಯಾ ಸಾರಾ ಥಾಮಸ್ ಮಹಾಪುರುಷರ ಕಾರ್ಯಕ್ರಮಕ್ಕೆ ಬರಲು ಉದಾಸೀನ ತೋರುತ್ತಾರೆ. ಈವರೆಗೆ ಅವರು ಒಂದೇ ಒಂದೂ ಕಾರ್ಯಕ್ರಮಕ್ಕೆ ಬಂದಿಲ್ಲ. ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷರಾಗಿರುವ ಡಿಸಿಯೂ ಕೂಡ ಕಾರ್ಯಕ್ರಮಕ್ಕೆ ಬಂದಿಲ್ಲ, ಸಿಇಒ ಪತ್ತೆ ಇಲ್ಲ ಎಂದು ಧಿಕ್ಕಾರದ ಘೋಷಣೆ ಕೂಗುತ್ತಾ ಕಾರ್ಯಕ್ರಮ ತಡೆದರು.
ಇದನ್ನೂ ಓದಿ: ಅತಿಥಿ ಉಪನ್ಯಾಸಕರ ಪ್ರತಿಭಟನೆ ವೇಳೆ ಜ್ಞಾನತಪ್ಪಿ ಬಿದ್ದ ಉಪನ್ಯಾಸಕಿ : ಆಸ್ಪತ್ರೆಗೆ ದಾಖಲು
ಎಡಿಸಿ ಎಷ್ಟೇ ಮನವರಿಕೆ ಮಾಡಿದರೂ ಹೋರಾಟಗಾರರು ಜಗ್ಗದೇ ಕುಳಿತಿದ್ದರು. ಕೊನೆಗೆ, ಎಸ್ಪಿ ಬದಲಿಗೆ ಎಎಸ್ಪಿ ಬಂದಿದ್ದರಿಂದ ಮತ್ತಷ್ಟು ಅಸಮಾಧಾನಗೊಂಡ ಹೋರಾಟಗಾರರು ಕಾರ್ಯಕ್ರಮ ಬಹಿಷ್ಕರಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಹೊರ ನಡೆದರು.