ಚಾಮರಾಜನಗರ : ಅತ್ತೆ ಸಾವಿನ ಬೆನ್ನಲ್ಲೇ ಅಳಿಯ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಚಾಮರಾಜನಗರ ತಾಲೂಕಿನ ಕಾಗಲವಾಡಿ ಗ್ರಾಮದ ರಾಜು ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ರಾಜು ಅವರ ಅತ್ತೆ ತೀರಿಕೊಂಡಿದ್ದು, ಶನಿವಾರ ಹಾಲು ತುಪ್ಪ ಕಾರ್ಯ ನಡೆದಿತ್ತು. ಈ ಕಾರ್ಯ ಮುಗಿಸಿಕೊಂಡು ಕೆರೆಯ ಬಳಿ ಮುಖ ತೊಳೆಯಲು ತೆರಳಿದ್ದ ಸಂದರ್ಭದಲ್ಲಿ ಅಳಿಯ ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದು ಚಾಮರಾಜನಗರ ಪೂರ್ವ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಬೈಕ್ ಕದ್ದು ಪೊದೆಯಲ್ಲಿ ಇಟ್ಟಿದ್ದ ಆರೋಪಿ ಬಂಧನ : ಹನೂರು ತಾಲೂಕಿನ ಒಡೆಯರಪಾಳ್ಯ ಟಿಬೆಟಿಯನ್ ಕ್ಯಾಂಪಿನಲ್ಲಿ ಬೈಕ್ ಕದ್ದು ಪೊದೆಯಲ್ಲಿ ಬಚ್ಚಿಟ್ಟವನನ್ನು ಹನೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹೊಸಪೋಡು ಗ್ರಾಮದ ಸಿದ್ದರಾಜು ಎಂದು ಗುರುತಿಸಲಾಗಿದೆ. ಟಿಬೆಟಿಯನ್ ಸೆಟಲ್ ಮೆಂಟ್ ಕಚೇರಿ ಎದುರು ನಿಲ್ಲಿಸಿದ್ದ ಬೈಕನ್ನು ಕದ್ದಿದ್ದ ಆರೋಪಿ ಸಮೀಪದ ಪೊದೆಯೊಂದರಲ್ಲಿ ಬಚ್ಚಿಟ್ಟಿದ್ದ. ಈ ಬಗ್ಗೆ ಕಳೆದ ಜೂ. 8 ರಂದು ದೂರು ದಾಖಲಾಗಿತ್ತು. ಬಳಿಕ ಹನೂರು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಸಿದ್ದರಾಜವನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಗಾಂಜಾ ಮಾರಾಟಗಾರರ ಬಂಧನ: ಶಿವನಸಮುದ್ರ, ವೆಸ್ಲಿ ಸೇತುವೆ ಬಳಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಕೊಳ್ಳೇಗಾಲ ತಾಲೂಕಿನ ಮತ್ತಿಕರೆ ಗ್ರಾಮದಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಬಾಳಹುಣಸೆ ಗ್ರಾಮದ ರಾಚಯ್ಯ(45) ಎಂದು ಗುರುತಿಸಲಾಗಿದೆ. ಈತ ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಪ್ರವಾಸಿಗರು ಮತ್ತು ಯುವಕರಿಗೆ ನೀಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹನೂರು ತಾಲೂಕಿನ ಹೊಸಪೋಡು ಗ್ರಾಮದಲ್ಲಿ ಗಾಂಜಾ ಸಂಗ್ರಹಿಸಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಬಂಧಿತಳನ್ನು ಪುಟ್ಟಮಾದಮ್ಮ(55) ಎಂದು ಗುರುತಿಸಲಾಗಿದೆ. ಅಕ್ರಮವಾಗಿ ಗಾಂಜಾ ಸಂಗ್ರಹ ಹಾಗೂ ಮಾರಾಟ ಆರೋಪದ ಹನೂರು ಪೊಲೀಸರು ದಾಳಿ ನಡೆಸಿ ಮಹಿಳೆಯನ್ನು ಬಂಧಿಸಿದ್ದಾರೆ.
ಓದಿ : ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ.. ಐವರ ಪ್ರಾಣ ತೆಗೆದ ಕಂಟೈನರ್ ಚಾಲಕ