ಚಾಮರಾಜನಗರ : ಉಕ್ರೇನ್ನಲ್ಲಿ ಭಾರತೀಯರಿಗೆ ತಾರತಮ್ಯ ಎಸಗಲಾಗುತ್ತಿದ್ದು, ರಕ್ಷಣಾ ಕಾರ್ಯಕ್ಕೆ ಇದು ತೊಡಕಾಗಿದೆ ಎಂದು ತಾಯ್ನಾಡಿಗೆ ಇಂದು ಮರಳಿದ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದ ಮೆಡಿಕಲ್ ವಿದ್ಯಾರ್ಥಿನಿ ಕಾವ್ಯಾ ಹೇಳಿದರು.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಉಕ್ರೇನ್ನ ಕಾರ್ಖೀವ್ ನಿಂದ ಗಡಿ ಭಾಗಗಳಿಗೆ ತೆರಳಲು ರೈಲಿನಲ್ಲೇ ಹೋಗಬೇಕಿದ್ದು, ಭಾರತೀಯರಿಗೆ ಕೊನೆಯ ಅವಕಾಶ ಕೊಡಲಾಗುತ್ತದೆ. ಮೊದಲು ಉಕ್ರೇನಿಯರಿಗೆ ಅವಕಾಶ, ನಂತರ ನೈಜಿರಿಯನ್ಸ್, ಬಳಿಕ ಟಿಬೆಟಿಯನ್ ಅದಾದ ನಂತರ ಚೈನಿಸ್ ಕೊನೆಗೇ ಭಾರತೀಯರು. ಅದರಲ್ಲೂ ಮಹಿಳೆಯರನ್ನು ಮಾತ್ರ ರೈಲಿನಲ್ಲಿ ಹತ್ತಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಸಾವಿರಕ್ಕೂ ಅಧಿಕ ಮಂದಿ ಇನ್ನೂ ಅಲ್ಲೇ ಉಳಿದಿದ್ದಾರೆ ಎಂದು ಅಲ್ಲಿನ ವಾಸ್ತವತೆ ಬಿಚ್ಚಿಟ್ಟರು.
ನಾವು ಭಾರತದ 7 ಮಂದಿ ಸಹಪಾಠಿಗಳು 9 ದಿನ ಬಂಕರ್ನಲ್ಲೇ ಉಳಿದುಕೊಂಡಿದ್ದೆವು. ಕರ್ಫ್ಯೂ ತೆಗೆದ ಬಳಿಕವಷ್ಟೇ ಊಟ, ನೀರು ಶೇಖರಿಸಿಟ್ಟಿಕೊಳ್ಳುತ್ತಿದ್ದೆವು. ಬಾಂಬ್ ಸದ್ದು, ಮಿಸೈಲ್ ಹಾರುವುದು ಕಿವಿಗೆ ಅಪ್ಪಳಿಸುತ್ತಿತ್ತು. ಮಾ.2ರಂದು ಪೋಲ್ಯಾಂಡ್ ಗಡಿಗೆ ತಲುಪಿದ ನಂತರ ಭಾರತ ರಾಯಭಾರ ಕಚೇರಿ ತಮಗೆ ಹೆಚ್ಚು ಸಹಾಯ ಮಾಡಿತು ಎಂದು ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.
ಇದನ್ನೂ ಓದಿ : ಉಕ್ರೇನ್ನಿಂದ ಇಂದು 2,135 ಭಾರತೀಯರು ತವರಿಗೆ
ಇದೇ ವೇಳೆ, 1,000 ಅಧಿಕ ಮಂದಿ ಯುದ್ಧಗ್ರಸ್ಥ ಕೀವ್ನಲ್ಲೇ ಸಿಲುಕಿರುವ ಭಾರತೀಯರನ್ನು ಕರೆಸಿಕೊಳ್ಳಬೇಕೆಂದು ಮನವಿ ಮಾಡಿದ ಅವರು, ಈಗಾಗಲೇ 4 ವರ್ಷ ಅಲ್ಲೇ ಓದಿರುವುದರಿಂದ ಯುದ್ಧದ ನಂತರ ಅಲ್ಲೇ ವಿದ್ಯಾಭ್ಯಾಸ ಮುಂದುವರೆಸುವುದಾಗಿ ತಿಳಿಸಿದರು.