ಚಾಮರಾಜನಗರ: ಉತ್ತಮ ಬೆಳೆ ನಿರೀಕ್ಷಿದ್ದ ರೈತರಿಗೆ ವಿದ್ಯುತ್ ಕಣ್ಣಾಮುಚ್ಚಾಲೆ ಶಾಕ್ ನೀಡಿದ್ದು, ಕಳೆದ 15 ದಿನಗಳಿಂದ ಬೆಳೆಗೆ ನೀರು ಹಾಯಿಸಲಾಗದೇ ರೈತರು ಕಂಗಾಲಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಕುಮಚಹಳ್ಳಿಯಲ್ಲಿ ನಡೆದಿದೆ.
ವಿದ್ಯುತ್ ಲೇನ್ ಬದಲಾಗಿದ್ದರಿಂದ ಕುಮಚಹಳ್ಳಿ ಎಲ್ಲೆ ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ. ಅರ್ಧ ತಾಸು 3 ಫೇಸ್ ವಿದ್ಯುತ್ ಕೂಡ ಚೆಸ್ಕಾಂ ನೀಡುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದು, ಸಮಸ್ಯೆ ಪರಿಹರಿಸುವ ಗೋಜಿಗೆ ಹೋಗುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಬಾಳೆ, ಟೊಮೇಟೊ, ಅರಿಶಿಣ, ಈರುಳ್ಳಿ ಹಾಗೂ ಇನ್ನಿತರ ತರಕಾರಿ ಬೆಳೆಗಳಿಗೆ ನೀರು ಹಾಯಿಸಲಾಗುತ್ತಿಲ್ಲ. ಶ್ಯಾಂಡ್ರಳ್ಳಿ ಹಾಗೂ ಕುಮಚಹಳ್ಳಿ ಗ್ರಾಮಗಳಿಗೆ ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿಗೂ ಸಮಸ್ಯೆಯಾಗುತ್ತಿದೆ. ಚೆಸ್ಕಾಂ ಅಧಿಕಾರಿಗಳು ಈಗಲಾದರೂ ಗ್ರಾಮಸ್ಥರ ಹಿತಕ್ಕಾಗಿ ಕಾರ್ಯ ನಿರ್ವಹಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಸೋಮವಾರದೊಳಗೆ ಅಧಿಕಾರಿಗಳು ವಿದ್ಯುತ್ ಸಮಸ್ಯೆ ಪರಿಹರಿಸಬೇಕು, ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.