ಕೊಳ್ಳೇಗಾಲ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ನಿವಾಸಿ ಭೂಮಿಕಾ ಎಂಬುವರು ಉಕ್ರೇನ್‌ನಲ್ಲಿ ಸಿಲುಕ್ಕಿದ್ದು, ಪೋಷಕರು ಆತಂಕಗೊಂಡಿದ್ದಾರೆ.
ಗಣಿ ಉದ್ಯಮಿ ವೀರಮಾದು ಎಂಬುವರ ಮೊಮ್ಮಗಳಾದ ಭೂಮಿಕಾ ಉಕ್ರೇನ್‌ನಲ್ಲಿ ಕಳೆದ 5 ವರ್ಷಗಳಿಂದ ವೈದ್ಯಕೀಯ (ಎಂಡಿ) ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ಅನಿರೀಕ್ಷಿತವಾಗಿ ಉಕ್ರೇನ್‌ನಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಿದ್ದು, ಪೋಷಕರು ಆತಂಕಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: ಹದಗೆಡುತ್ತಿದೆ ಉಕ್ರೇನ್ ಪರಿಸ್ಥಿತಿ.. ನಮಗೆ ನೀರು ಸಿಗುತ್ತಿಲ್ಲ.. ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿನಿ ಅಳಲು
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಭೂಮಿಕಾಳ ತಾತ ವೀರಮಾದು ಅವರು, ಉಕ್ರೇನ್‌ನಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗುತ್ತಿದಂತೆ ಭೂಮಿಕಾಳನ್ನು ಫೋನ್ ಮೂಲಕ ಸಂಪರ್ಕಿಸಿ ಯೋಗ ಕ್ಷೇಮ ವಿಚಾರಿಸಿದೆ. ನಾನಿಲ್ಲಿ ಸೇಫ್ ಆಗಿದ್ದೀನಿ.
ಇಲ್ಲಿನ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿದೆ. ನಾಳೆ ಬರ್ತಿವಿ ಅಂತಾ ಹೇಳಿದಳು. ನನ್ನ ಮೊಮ್ಮಗಳಂತೆ ಕರ್ನಾಟಕದ ಅನೇಕ ಮಕ್ಕಳಿದ್ದು, ಎಲ್ಲರೂ ಯಾವುದೇ ತೊಂದರೆ ಇಲ್ಲದೆ ಸ್ವದೇಶಕ್ಕೆ ಬರಲಿ ಎಂಬುದು ನಮ್ಮ ಆಶಯ ಎಂದಿದ್ದಾರೆ.
ಈ ಬಗ್ಗೆ ಭೂಮಿಕಾ ಅಲ್ಲಿಂದಲೇ ವಿಡಿಯೋ ಸಂದೇಶ ಕಳುಹಿಸಿದ್ದು, ಇಲ್ಲಿ ಯಾವುದೇ ಸಮಸ್ಯೆ ಇಲ್ಲ. 15 ದಿನಗಳ ವರೆಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಯಾರೂ ಭಯಪಡುವ ಅಗತ್ಯ ಇಲ್ಲ ಎಂದು ಪೋಷಕರಿಗೆ ತಿಳಿಸಿದ್ದಾರೆ.