ಚಾಮರಾಜನಗರ: ಕಳೆದ ನಾಲ್ಕೈದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಲೆಮಹದೇಶ್ವರ ಬೆಟ್ಟದಲ್ಲಿನ ಪಾರ್ವತಿ ದೇವರ ಉತ್ಸವ ಮೂರ್ತಿಯ ಚಿನ್ನದ ಕರಡಿಗೆ ಇಂದು ಕಸ ಬಿಸಾಡುವ ಸ್ಥಳದಲ್ಲಿ ಪತ್ತೆಯಾಗಿದೆ.
ಉತ್ಸವ ಮೂರ್ತಿ ಶ್ರೀ ಪಾರ್ವತಿ ಅಮ್ಮನವರಿಗೆ ಹಾಕಿದ್ದ ಸುಮಾರು 30 ಗ್ರಾಂ.ತೂಕದ ಚಿನ್ನದ ಕರಡಿಗೆ ಇಂದು ಮಧ್ಯಾಹ್ನ ದೇಗುಲದ ಎದುರು ಕಸ ಹಾಕುವ ಸ್ಥಳದಲ್ಲಿ ಪತ್ತೆಯಾಗಿದೆ. ಕರಡಿಗೆಯನ್ನು ಕಂಡ ಹೊರಗುತ್ತಿಗೆ ನೌಕರ ಸುನೀಲ್ ಕುಮಾರ್ ಕೂಡಲೇ ಕಾರ್ಯದರ್ಶಿಗೆ ವಿಷಯ ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತ್ಯಾಜ್ಯ ವಸ್ತು ಮಧ್ಯೆ ಸಿಕ್ಕ ದೇವರಿಗೆ ಧರಿಸಿದ್ದ ಚಿನ್ನದ ಕರಡಿಗೆಯನ್ನು ವಶಕ್ಕೆ ಪಡೆದ ಮಹಜರು ನಡೆಸುತ್ತಿದ್ದು, ಬಳಿಕ ಕರಡಿಗೆಯನ್ನು ಹಸ್ತಾಂತರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಓದಿ: ಮಾದಪ್ಪನ ಚಿನ್ನದ ಕರಡಿಗೆ ನಾಪತ್ತೆ : ಪ್ರಕರಣ ತಡವಾಗಿ ಬೆಳಕಿಗೆ
ಇಂದು ಮಾಧ್ಯಮಗಳಲ್ಲಿ ವರದಿ ಬಿತ್ತರದ ಬಳಿಕ ಉತ್ಸವ ಮೂರ್ತಿಯ ಚಿನ್ನದ ಕರಡಿಗೆ ಕಸ ಹಾಕುವ ಜಾಗದಲ್ಲಿ ದಿಢೀರನೆ ಪತ್ತೆಯಾಗಿದೆ. ಅಲ್ಲದೇ ಕಸ ಬಿಸಾಡುವ ಜಾಗದಲ್ಲಿ ಕರಡಿಗೆ ಪತ್ತೆಯಾಗಿದ್ದು, 5 ದಿನಗಳಿಂದ ಯಾರ ಕಣ್ಣಿಗೂ ಇಷ್ಟು ದಿನ ಬೀಳಲಿಲ್ಲವೇ?, ಕದ್ದೊಯ್ದು ಬಿಸಾಡಿದರೆ? ಎಂಬ ಹಲವು ಅನುಮಾನಗಳು ಭಕ್ತರಲ್ಲಿ ಮೂಡಿವೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಊಹಾಪೋಹಗಳಿಗೆ ತೆರೆ ಎಳೆಯಬೇಕಿದೆ.
ಹನೂರು ತಾಲೂಕಿನಲ್ಲಿರುವ ಮಲೆ ಮಹದೇಶ್ವರ ಬೆಟ್ಟದ ಉತ್ಸವ ಮೂರ್ತಿಯ ಚಿನ್ನದ ಕರಡಿಗೆ ಕಳೆದ ನಾಲ್ಕೈದು ದಿನಗಳಿಂದ ನಾಪತ್ತೆಯಾಗಿತ್ತು. ಲಕ್ಷಾಂತರ ರೂ. ಮೌಲ್ಯದ ಕರಡಿಗೆಯು ಅರ್ಚಕರ ಸುಪರ್ದಿಯಲ್ಲಿರಲಿದ್ದು, ತಿಂಗಳಿಗೊಮ್ಮೆ ಅರ್ಚಕರ ಸರದಿ ಬದಲಾಗುವಾಗ ನಾಪತ್ತೆಯಾಗಿತ್ತು.