ಚಾಮರಾಜನಗರ: ಗೌರಿ ಹಬ್ಬ ಎಂದರೆ ಸಂಭ್ರಮ, ಸಡಗರ, ನೃತ್ಯ, ಭಕ್ತಿಯ ಸಮರ್ಪಣೆ ಸಾಮಾನ್ಯ. ಆದರೆ, ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಗೌರಿಹಬ್ಬಕ್ಕೂ ಸೈನಿಕರಿಗೂ ನಂಟಿದೆ.
ಉಮ್ಮತ್ತೂರಿನ ಕೆಲವು ಪಾಳೇಗಾರರ ಮನೆತನಗಳು, ಸೈನಿಕ ಕುಟುಂಬಗಳು ಯುದ್ಧದಲ್ಲಿ ಮಡಿದ ವೀರ ಸೈನಿಕರಿಗೆ ಎಡೆಯಿಟ್ಟು ಅವರನ್ನು ಸ್ಮರಿಸುವ ಸಂಪ್ರದಾಯ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಮೈಸೂರು ರಾಜರ ಆಳ್ವಿಕೆಯಿದ್ದಾಗ ಉಮ್ಮತ್ತೂರು ಗ್ರಾಮಗಳಲ್ಲಿ ಪಾಳೇಗಾರರು ಆಡಳಿತವಿತ್ತು ಹಾಗೂ ಹೆಚ್ಚಿನ ಮಂದಿ ಸೈನ್ಯದಲ್ಲಿದ್ದರು. ಯುದ್ಧಕ್ಕೆ ತೆರಳುವ ಮುನ್ನ ಪಾಳೇಗಾರರು ಮತ್ತು ಸೈನಿಕರು ತಾವು ಹಿಂತಿರುಗಿ ಬರದಿದ್ದರೇ ತಮ್ಮನ್ನು ಗೌರಿ ಹಬ್ಬದಂದು ಕುಟುಂಬಸ್ಥರು ಸ್ಮರಿಸಬೇಕೆಂದು ಹೇಳಿದ್ದರು. ಕೆಲವು ಪಾಳೇಗಾರರು ಹಿಂತಿರುಗದಿದ್ದರಿಂದ ಅವರಿಗೆ ಎಡೆಯಿಟ್ಟು ಅವರನ ಸ್ಮರಿಸಿ ಗ್ರಾಮಕ್ಕೆ ಮತ್ತು ತಮ್ಮ ಕುಟುಂಬಕ್ಕೆ ಒಳಿತಾಗಬೇಕೆಂದು ಹಬ್ಬದ ರಾತ್ರಿ ಪ್ರಾರ್ಥಿಸುತ್ತಾರೆ. ಪಾಳೇಗಾರರ ಮೂರ್ತಿಗಳಿರುವ ಪಕ್ಕದಲ್ಲೇ ಸಿದ್ದೇಶ್ವರ ಸ್ವಾಮಿ ದೇಗುಲವಿದ್ದು, ಅಲ್ಲೂ ಕೂಡ ವಿಶೇಷ ಪೂಜೆ ನಡೆಯಲಿದೆ ಎಂದು ಚೆನ್ನವೀರಗೌಡರ ಮನೆತನದ ಉಮ್ಮತ್ತೂರು ಕುಮಾರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು. ಗ್ರಾಮದಲ್ಲಿನ ಪಟೇಲ್ ಮನೆತನ, ಚೆನ್ನವೀರಗೌಡರ ಮನೆತನದ ಕುಟುಂಬಸ್ಥರು, ಸಂಬಂಧಿಕರು ಈ ಸ್ಮರಣೆಯಲ್ಲಿ ಭಾಗಿಯಾಗುತ್ತಾರೆ.
ಇಂಡಿ-ಬೇಳೆ ಸಾರು- ತಂಬಿಟ್ಟು ವಿಶೇಷ : ಪಾಳೇಗಾರರ ಕುಟುಂಬಸ್ಥರು ಎಡೆ ಹಾಕಲು ಇಂಡಿ-ಬೇಳೆ ಸಾರನ್ನು ಮಾಡಲಿದ್ದು, ಈ ಸಾರನ್ನು ಕೇವಲ ಗೌರಿ ಹಬ್ಬದ ದಿನದಂದು ಮಾತ್ರ ತಯಾರಿಸಲಾಗುತ್ತದೆ. ಬದನೆಕಾಯಿ, ನುಗ್ಗೆಸೊಪ್ಪು, ಬೇಳೆ ಹಾಕಿದ ಇಂಡಿ- ಬೇಳೆ ಸಾರು, ಕರಿಎಳ್ಳಿನ ತಂಬಿಟ್ಟು, ಹೊಸಕ್ಕಿ ತಂಬಿಟ್ಟು, ಬಾಳೆಹಣ್ಣನ್ನು ಪಾಲೇಗಾರರ ಮೂರ್ತಿಗಳಿಗೆ ಅರ್ಪಿಸಿ ಬಳಿಕ ಮನೆಯಲ್ಲಿ ಸಾಮೂಹಿಕ ಭೋಜನ ಮಾಡುತ್ತೇವೆ ಎಂದು ಗ್ರಾಮಸ್ಥರಾದ ಉಮ್ಮತ್ತೂರು ಆನಂದ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಗೌರಿಹಬ್ಬಕ್ಕೂ ಹುತಾತ್ಮ ಸೈನಿಕರಿಗೂ ಸಂಬಂಧ ಬೆಸೆದಿರುವ ಉಮ್ಮತ್ತೂರಿನ ಆಚರಣೆ ವಿಶೇಷವೂ ಹೌದು ವಿರಳಾತಿ ವಿರಳವೂ ಆಗಿದೆ.