ಚಾಮರಾಜನಗರ: ಅಂಧ ವ್ಯಕ್ತಿಯೋರ್ವನ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಹನೂರು ತಾಲೂಕಿನ ಕತ್ತೆಕಾಲು ಪೋಡಿನಲ್ಲಿ ಭಾನುವಾರ ನಡೆದಿದೆ. ಹನೂರು ತಾಲೂಕಿನ ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕತ್ತೆಕಾಲುಪೊಡು ಗ್ರಾಮದ ನಿವಾಸಿ ಮಾದೇಶ(45) ಕಾಡಾನೆ ದಾಳಿಗೆ ಒಳಗಾದವರು.
ಅಂಧ ವ್ಯಕ್ತಿಯಾಗಿರುವ ಮಾದೇಶ ಮಧ್ಯಾಹ್ನ ಹೊತ್ತಿಗೆ ಜಮೀನಿನಲ್ಲಿದ್ದಾಗ ಏಕಾಎಕಿ ಕಾಡಾನೆ ದಾಳಿ ಮಾಡಿದೆ. ಪರಿಣಾಮ ಕೈ ಹಾಗೂ ಕಾಲು ಮುರಿದಿದೆ. ಸಂಜೆ ಹೊತ್ತಿಗೆ ದನಗಾಹಿ ಯುವಕರಿಂದ ಆನೆದಾಳಿ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ, ಅಂಧ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಆಂಬ್ಯುಲೆನ್ಸ್ ಇಲ್ಲದೇ ಪರದಾಟ: ಪಿ ಜಿ ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ವಾಹನವಿದ್ದರೂ ಖಾಯಂ ಚಾಲಕನನ್ನು ನೇಮಕ ಮಾಡದಿರುವ ಪರಿಣಾಮ ಪದೇಪದೇ ರೋಗಿಗಳು ತೊಂದರೆ ಅನುಭವಿಸಬೇಕಾಗಿದೆ. ಆಸ್ಪತ್ರೆಗೆ ಸೇರಿಸಲು ಸಮಯಕ್ಕೆ ಸರಿಯಾಗಿ ತುರ್ತು ವಾಹನ ಬಾರದ ಹಿನ್ನೆಲೆ ಅರಣ್ಯ ಇಲಾಖೆಯ ಸಿಬ್ಬಂದಿ ಇಲಾಖೆ ವಾಹನವನ್ನು ಕೊಟ್ಟು ಸಮಯ ಪ್ರಜ್ಞೆ ಮೆರೆದಿದ್ದಾರೆ.
ಇದನ್ನೂ ಓದಿ: ಕಾಡಾನೆ ದಾಳಿಗೆ ಚಿಕ್ಕಮಗಳೂರಲ್ಲಿ ರೈತ ಬಲಿ.. ಭೈರನ ಸೆರೆಯಿಂದ ನಿಟ್ಟುಸಿರು ಬಿಟ್ಟ ಜನರಿಗೆ ಮತ್ತೆ ಆತಂಕ