ಚಾಮರಾಜನಗರ: ಹನೂರು ತಾಲೂಕಿನ ಹುಲ್ಲೇಪುರ ಗ್ರಾಮದಲ್ಲಿ ತಲೆ ಎತ್ತಿರುವ ಕೋಳಿ ಸಾಕಾಣಿಕೆ ಕೇಂದ್ರದಲ್ಲಿನ ಅವೈಜ್ಞಾನಿಕ ನಿರ್ವಹಣೆಯಿಂದ ಇಲ್ಲಿನ ರೈತರು ನೊಣಗಳಿಂದ ಜಾನುವಾರುಗಳನ್ನು ಕಾಪಾಡಲು ಸೀರೆಗಳ ಮೊರೆ ಹೋಗುತ್ತಿದ್ದಾರೆ.
ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಸ್ಥಾಪಿಸಿರುವ 50 ಸಾವಿರ ಕೋಳಿ ಸಾಕಾಣಿಕೆ ಸಾಮಾರ್ಥ್ಯದ ಫಾರಂನಲ್ಲಿ ಸರಿಯಾದ ನಿರ್ವಹಣೆಯಿಲ್ಲ. ಹೀಗಾಗಿ, ಹನೂರು ಹೊರವಲಯ, ರಾಯರದೊಡ್ಡಿ, ಚಿಂಚಳ್ಳಿ ಹನೂರು, ಯ.ದೊಡ್ಡಿ ಗ್ರಾಮಗಳಲ್ಲಿ ನೊಣಗಳ ಕಾಟ ಮಿತಿ ಮೀರಿದೆ. ಇದರಿಂದ ಜನರು ಊಟ ಮಾಡಲಾಗದ, ಹೈನುಗಾರಿಕೆ ನಡೆಸಲಾಗದ ಸ್ಥಿತಿಯಲ್ಲಿದ್ದು, ಕಂದಾಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯರದೊಡ್ಡಿ ಗ್ರಾಮದ ಹೊನ್ನಯ್ಯ ಈಟಿವಿ ಭಾರತದೊಂದಿಗೆ ಮಾತನಾಡಿ, 'ಕೋಳಿ ಫಾರಂನವರು ಸರಿಯಾಗಿ ತ್ಯಾಜ್ಯ ನಿರ್ವಹಣೆ ಮಾಡುತ್ತಿಲ್ಲ. ಮೊದಮೊದಲು ದುರ್ವಾಸನೆಯನ್ನೇನೋ ಸಹಿಸಿಕೊಂಡೆವು. ಆದರೆ, ಈಗ ನೊಣಗಳ ಕಾಟ ತಾಳಲಾಗುತ್ತಿಲ್ಲ. ಹಸುಗಳ ಮೇಲೆ ನೂರಾರು ನೊಣಗಳು ಕುಳಿತು ಕಚ್ಚಿ ಗಾಯಗೊಳಿಸಿವೆ. ಗಾಯ ದೊಡ್ಡದಾಗಬಾರದೆಂದು ಹಸುಗಳಿಗೆ ಸೀರೆ ಸುತ್ತಿ ನೊಣಗಳಿಂದ ಕಾಪಾಡಲು ಮುಂದಾಗಿದ್ದೇವೆ' ಎಂದು ಅಳಲು ತೋಡಿಕೊಂಡರು.
ರೈತ ನಾಗರಾಜು ಪ್ರತಿಕ್ರಿಯಿಸಿ, 'ಬೆಳೆಗಳ ಮೇಲೆಯೂ ನೊಣಗಳು ಕೂರುತ್ತಿದ್ದು, ಫಸಲು ಏನಾಗುವುದೋ ಎಂಬ ಭೀತಿ ಶುರುವಾಗಿದೆ. ಮನೆಯಲ್ಲಿ ನೊಣ ಮುತ್ತಿಕ್ಕದ ಜಾಗವೇ ಇಲ್ಲ. ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದರು.
'ಈ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಗೊಬ್ಬರ ವಿಲೇವಾರಿ ಮಾಡಲು ಕಷ್ಟವಾಗುತ್ತಿದೆ. ಇನ್ನೊಂದು ವಾರದಲ್ಲಿ ಈ ಸಮಸ್ಯೆ ಸರಿಪಡಿಸುತ್ತೇನೆ. ನೊಣ ಬಾರದ ಹಾಗೆ ಔಷಧ ನೀಡುತ್ತೇವೆ' ಎಂದು ಕೋಳಿ ಫಾರಂ ಮಾಲೀಕ ರಾಜಪ್ಪ ಹೇಳಿದ್ದಾರೆ.