ಚಾಮರಾಜನಗರ : ಕೊರೊನಾ ಮುಕ್ತವಾಗಿರುವುದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿವೆ. ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಇದನ್ನು ವೀಕ್ಷಿಸಲು ತೆರಳಿದ್ದ ಜಿಲ್ಲಾಧಿಕಾರಿ ಕೊಂಚ ಸಮಯ ರೈತರೊಂದಿಗೆ ಬೆರೆತರು.
ಡಿಸಿ ಡಾ.ಎಂ ಆರ್ ರವಿ ಗುಂಡ್ಲುಪೇಟೆ ತಾಲೂಕಿನ ವಿವಿಧೆಡೆ ಜಮೀನುಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚಿಸಿದರು. ಅಲ್ಲದೆ ಕಂದೇಗಾಲದ ಹೊಲವೊಂದರಲ್ಲಿ ನೊಗ ಹಿಡಿದು ಹೊಲ ಉಳುಮೆ ಮಾಡಿದರು. ಮತ್ತೊಂದು ಹೊಲದಲ್ಲಿ ಸೂರ್ಯಕಾಂತಿ ಬೀಜ ಬಿತ್ತನೆ ಮಾಡಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಿದರು. ಜಿಲ್ಲಾಧಿಕಾರಿ ಬೀಜ ಬಿತ್ತುವ ವಿಡಿಯೋ ಈಗ ವೈರಲ್ ಆಗಿದೆ.
ಈ ವೇಳೆ ಮಾತನಾಡಿದ ಅವರು, ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಯಾರು ಅಡ್ಡಿಪಡಿಸದಂತೆ ಸೂಚಿಸಲಾಗಿದೆ. ರೈತರು ಜಿಲ್ಲೆ ಹಾಗೂ ಹೊರ ರಾಜ್ಯಗಳ ಮಾರುಕಟ್ಟೆಗೆ ಕೃಷಿ ಉತ್ಪನ್ನ ಕೊಂಡೊಯ್ಯಲು ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ರೈತರು ಯಾವುದೇ ಸಂದರ್ಭದಲ್ಲೂ ಧೃತಿಗೆಡಬಾರದು, ನಿಮ್ಮೊಡನೆ ಸರ್ಕಾರವಿದೆ ಎಂದರು.
ಉತ್ತಮ ಮಳೆ : ಮಂಗಳವಾರ ಸಂಜೆ ಚಾಮರಾಜನಗರ, ಹನೂರು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಕೆಲವೆಡೆ ಆಲಿಕಲ್ಲು ಸಹಿತ ಜೋರು ಮಳೆ ಸುರಿದಿದೆ.