ಚಾಮರಾಜನಗರ: ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಬಹುಜನ ಸಮಾಜವಾದಿ ಪಕ್ಷದಲ್ಲಿ ಪರ ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೆ ಕಸ, ಕಸದ ಬುಟ್ಟಿಗೆ ಸೇರುತ್ತಿದೆ ಹೇಳುವ ಮೂಲಕ ಎನ್.ಮಹೇಶ್ ಅವರ ನಡೆಯನ್ನು ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಕಟುವಾಗಿ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷದಿಂದ ಯಾರೇ ಹೊರ ಹೋದರೂ ಕಸ, ಕಸದ ಬುಟ್ಟಿಗೆ ಸೇರಿದೆ ಎಂಬ ಕಾನ್ಷಿರಾಂ ಅವರ ವಾಕ್ಯವನ್ನು ಮಹೇಶ್ ಅವರು ಉದ್ಧರಿಸುತ್ತಿದ್ದರು, ಈಗ ಅವರೇ ಆ ವಾಕ್ಯಕ್ಕೆ ಉದಾಹರಣೆಯಾಗಿ ನಿಂತಿರುವುದು ದೊಡ್ಡ ದುರಂತ ಎಂದು ವ್ಯಂಗ್ಯವಾಡಿದರು.
ತಾಪಂ ಸದಸ್ಯರೊಬ್ಬರು ಕಾಂಗ್ರೆಸ್ಗೆ ಪಕ್ಷಾಂತರಗೊಂಡಿದ್ದ ವೇಳೆ ಆತನಿಗೆ ಇದೇ ಎನ್.ಮಹೇಶ್ ಅವರು ಸವಾಲು ಹಾಕಿ ರಾಜೀನಾಮೆ ಕೊಟ್ಟು ಸೇರಿಕೊಂಡ ಪಕ್ಷದಡಿ ಚುನಾವಣೆ ಎದುರಿಸಲಿ ಎಂದು ಹೇಳಿದ್ದರು. ಈಗ ಅವರೇ ಈ ಚಾಲೆಂಜ್ ಸ್ವೀಕರಿಸಬೇಕು, ರಾಜೀನಾಮೆ ಕೊಟ್ಟು ಬಿಜೆಪಿಯಿಂದ ಗೆಲ್ಲಲಿ ಎಂದು ಸವಾಲು ಹಾಕಿದರು.
ಮಹೇಶ್ ಪಕ್ಷ ಬದಲಾವಣೆಯಿಂದ ಬಿಎಸ್ಪಿ ಶಕ್ತಿ ಕುಂದುವುದಿಲ್ಲ. ಅವರಿಲ್ಲದಿದ್ದಾಗಲೇ ಗ್ರಾಪಂ ಚುನಾವಣೆಯಲ್ಲಿ ಹೆಚ್ಚು ಮಂದಿ ಗೆದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಗತವಾದ ಟೀಕೆ ಮಾಡುತ್ತಿರುವವರು ನಮ್ಮ ಪಕ್ಷದ ಕಾರ್ಯಕರ್ತರಲ್ಲ. ಕಳೆದ ವರ್ಷವೇ ವ್ಯಕ್ತಿಗತ ಟೀಕೆ ಮಾಡಬಾರದೆಂದು ಕಾರ್ಯಕರ್ತರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಬಿಜೆಪಿಯಲ್ಲಾದರೂ ಪಕ್ಷ ನಿಷ್ಠೆ ತೋರಿಸಲಿ: ಎನ್. ಮಹೇಶ್ ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪಕ್ಷ ನಿಷ್ಠೆ, ಹೈ ಕಮಾಂಡ್ ಆದೇಶ ಪಾಲನೆಯನ್ನು ನೋಡಿ ಕಲಿಯಲಿ. ಅವರು ಹೈ ಕಮಾಂಡ್ ಸೂಚನೆ ಪಾಲಿಸಿದ್ದರೇ ಪಕ್ಷ ಬಿಡುವ ಅಗತ್ಯವೇ ಇರಲಿಲ್ಲ. ಮಠಾಧೀಶರು, ಇಡೀ ಸಮುದಾಯ ಅವರ ಬೆಂಬಲಕ್ಕೆ ನಿಂತರು ಬಿಎಸ್ವೈ ರಾಜೀನಾಮೆ ಕೊಟ್ಟರು. ಈ ಪಕ್ಷ ನಿಷ್ಟೆಯನ್ನು ಮಹೇಶ್ ಅವರು ಬಿಜೆಪಿಯಲ್ಲಾದರೂ ತೋರಿಸಲಿ ಎಂದು ವ್ಯಂಗ್ಯವಾಡಿದರು.