ಚಾಮರಾಜನಗರ: ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಪಕ್ಷದಿಂದ ಉಚ್ಛಾಟನೆಗೊಂಡ ನಂತರ ಪಕ್ಷದಲ್ಲಿ ಮಾಯಾವತಿ ಆದೇಶದ ಪರ-ವಿರೋಧದ ಗುಂಪುಗಳು ಹುಟ್ಟಿಕೊಂಡಿದ್ದು, ಇಂದು ರಾಜ್ಯಾದ್ಯಂತ ಬಿಎಸ್ಪಿಯ ಹಲವು ಪದಾಧಿಕಾರಿಗಳು ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಬಹುಜನ ಸಮಾಜವಾದಿ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಹರಿರಾಂ, ಮೈಸೂರು- ಚಾಮರಾಜನಗರ ಉಸ್ತುವಾರಿ ಕರಾಟೆ ಸಿದ್ದರಾಜು, ಚಾಮರಾಜನಗರ ಬಿಎಸ್ಪಿ ಅಧ್ಯಕ್ಷ ಸಂತೇಮರಹಳ್ಳಿ ಮಾದಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಾದೇಶ್ ಉಪ್ಪಾರ್ ಸೇರಿ ನೂರಾರು ಮಂದಿ ಆಯಾ ಜಿಲ್ಲಾ ಕೇಂದ್ರದಲ್ಲಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಶಾಸಕ ಮಹೇಶ್ ಅವರನ್ನು ಬೆಂಬಲಿಸಲಿದ್ದಾರೆ ಎಂದು ಚಾಮರಾಜನಗರ ತಾಲೂಕು ಬಿಎಸ್ಪಿ ಅಧ್ಯಕ್ಷ ಆಲೂರು ಮಲ್ಲು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಮಾಯಾವತಿಗೆ ಸೆಡ್ಡು:
ಬಹುಜನ ವಿದ್ಯಾರ್ಥಿ ಸಂಘ ಮತ್ತು ಬಹುಜನ ಸಮಾಜವಾದಿ ಪಕ್ಷದಲ್ಲಿ ಅಪಾರ ಬೆಂಬಲಿಗರನ್ನು ಹೊಂದಿರುವ ಎನ್.ಮಹೇಶ್, ಈ ಸಂಘಟನೆಯನ್ನೇ ಉಪಯೋಗಿಸಿಕೊಂಡು ಹೊಸ ಪಕ್ಷ ಕಟ್ಟಲು ಮುನ್ನುಡಿ ಇಟ್ಟಿದ್ದಾರೆ ಎಂದು ಮಹೇಶ್ ಆಪ್ತ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.
ಪಕ್ಷದಿಂದ ಉಚ್ಚಾಟನೆಗೊಂಡ ಬಳಿಕ ಶಾಸಕ ಮಹೇಶ್ ಬಿಜೆಪಿಗೆ ಸೇರುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು. ಇದಕ್ಕೆ, ಬೆಂಬಲಿಗರು ಕೂಡ ಬೆಂಬಲ ವ್ಯಕ್ತಪಡಿಸಿದ್ದರು. ರಾಜಕೀಯ ಲೆಕ್ಕಾಚಾರದಲ್ಲಿ ಹೊಸ ಪಕ್ಷ ಕಟ್ಟಲು ಮಹೇಶ್ ನೇತೃತ್ವದಲ್ಲಿ ಚಿಂತನೆ ನಡೆಯುತ್ತಿದ್ದು ಈಗಾಗಲೇ ಬಿಎಸ್ಪಿ ಇಬ್ಭಾಗದತ್ತ ಸಾಗುತ್ತಿದೆ.
ಈ ಸಂಬಂಧ ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಶಾಸಕ ಎನ್.ಮಹೇಶ್ ಪ್ರತಿಕ್ರಿಯಿಸಿ, ಆ ರೀತಿಯ ಚಿಂತನೆ ನಡೆದಿಲ್ಲ, ಬೆಂಬಲಿಗರು ಬಿಎಸ್ಪಿಗೆ ರಾಜೀನಾಮೆ ನೀಡುತ್ತಿರುವುದು ಕೂಡ ತಿಳಿದಿಲ್ಲ ಎಂದಷ್ಟೇ ಹೇಳಿದರು.
ಇಂದು ಬುಧವಾರ ಚಾಮರಾಜನಗರದಲ್ಲಿ ಬಿಎಸ್ಪಿ ಪದಾಧಿಕಾರಿಗಳು ರಾಜೀನಾಮೆ ನೀಡಲಿದ್ದು, ಹೊಸ ಪಕ್ಷ ಸ್ಥಾಪನೆ ಕುರಿತು ಮಾಹಿತಿ ಹೊರಗೆಡವಲಿದ್ದಾರೆ ಎನ್ನಲಾಗಿದೆ.