ಚಾಮರಾಜನಗರ: ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆಯಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಜನರು ಮತಗಟ್ಟೆಗೆ ಬಂದು ಮತ ಚಲಾಯಿಸುತ್ತಿದ್ದಾರೆ. ಗುಂಡ್ಲುಪೇಟೆ ವ್ಯಾಪ್ತಿಯ ಗ್ರಾಮ ಪಂಚಾಯತ್ ಚುನಾವಣೆ ಕೂಡಾ ಬಿರುಸಿನಿಂದ ಸಾಗಿದ್ದು ಜನರು ಕೊರೊನಾ ಮುಂಜಾಗ್ರತಾ ಕ್ರಮ ಕೈಗೊಂಡು ಮತಗಟ್ಟೆಗೆ ತೆರಳಿ ಮತ ಚಲಾಯಿಸುತ್ತಿದ್ದಾರೆ.
ಇದನ್ನೂ ಓದಿ: ಮತದಾನ ಚಿಹ್ನೆ ಬದಲಾವಣೆ : ಕೆ. ತುಪ್ಪದೂರಲ್ಲಿ ಕೆಲಕಾಲ ಮತದಾನ ಸ್ಥಗಿತ
ಜಿಲ್ಲೆಯ 1241 ಸ್ಥಾನಗಳಿಗೆ ಕಣದಲ್ಲಿದ್ದ 3079 ಮಂದಿಯಲ್ಲಿ 62 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ ಸ್ಥಾನಗಳಿಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಚಾಮರಾಜನಗರದ 43 ಗ್ರಾಮ ಪಂಚಾಯಿತಿಗಳ 742 ಸ್ಥಾನ, ಗುಂಡ್ಲುಪೇಟೆ ತಾಲೂಕಿನ 34 ಗ್ರಾ.ಪಂ, 499 ಸ್ಥಾನಕ್ಕೆ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿದ್ದರು. ಕೊರೊನಾ ಕರಿಛಾಯೆ ನಡುವೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ಆಯೋಗವು ಈ ಬಾರಿ ಕೋವಿಡ್-19 ಕಿಟ್ ನೀಡಿದೆ. ಇದರಲ್ಲಿ, ಮಾಸ್ಕ್, ಫೇಸ್ ಶೀಲ್ಡ್, ಸ್ಯಾನಿಟೈಸರ್, ಹ್ಯಾಂಡ್ಗ್ಲೌಸ್ ಗಳಿವೆ. ಮತದಾರರು ಮತದಾನ ಮಾಡಲು ನಿಗದಿ ಪಡಿಸಿರುವ 22 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತಂದು ಅಧಿಕಾರಿಗಳಿಗೆ ತೋರಿಸಿ ಮತದಾನ ಮಾಡಬಹುದಾಗಿದೆ. ಕೋವಿಡ್-19 ಸೋಂಕಿತರು ಹಾಗೂ ಶಂಕಿತರು ಮತದಾನ ಮಾಡಲು ಇಚ್ಚಿಸಿದಲ್ಲಿ ಅಗತ್ಯ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಸಂಬಂಧಪಟ್ಟ ಮತಗಟ್ಟೆಗಳಿಗೆ ಮತದಾನದ ಕೊನೆಯ ಒಂದು ಗಂಟೆ ಅವಧಿಯಲ್ಲಿ ಬಂದು ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ.