ಚಾಮರಾಜನಗರ: ಚಾಮರಾಜನಗರ ಜಿಲ್ಲಾ ದಸರಾದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ವೇಳೆ ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ವೇದಿಕೆಯಲ್ಲೇ ಕಪ್ಪು ಬಾವುಟ ಪ್ರದರ್ಶನ ಮಾಡಿದರು. ಇದರಿಂದ ಉಸ್ತುವಾರಿ ಸಚಿವ ಸೋಮಣ್ಣ ಕೆಂಡಾಮಂಡಲವಾದರು.
ಚಾಮರಾಜೇಶ್ವರ ದೇವಾಲಯದ ಮುಂಭಾಗ ನಿರ್ಮಿಸಿರುವ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟಿಸಲು ಸಚಿವ ಸೋಮಣ್ಣ ವೇದಿಕೆ ಏರಿ ಕುಳಿತಿದ್ದರು. ಆಗ ಅಲ್ಲೇ ಇದ್ದ ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ದೀಪಾಲಂಕಾರದ ಅವ್ಯವಸ್ಥೆ ಖಂಡಿಸಿ ಕಪ್ಪು ಬಾವುಟ ಪ್ರದರ್ಶಿಸಿದರು. ಬಳಿಕ, ಅಲ್ಲೇ ಇದ್ದ ಪೊಲೀಸರು ನಂಜುಂಡಸ್ವಾಮಿ ಅವರನ್ನು ಹೊರಕ್ಕೆ ಎಳೆದೊಯ್ದರು. ಇನ್ನು, ಅನಿರೀಕ್ಷಿತ ಘಟನೆಯಿಂದ ಕೆಂಡಾಮಂಡಲರಾದ ಸಚಿವ ಸೋಮಣ್ಣ, ಪೊಲೀಸರು ಏನು ಕತ್ತೆ ಕಾಯುತ್ತಿದ್ದೀರಾ, ಯಾವ ರೀತಿ ವ್ಯವಸ್ಥೆ ಮಾಡಿದ್ದೀರಾ ಎಂದು ಕಿಡಿಕಾರಿದರು.
ನಾನು ಒಂದು ಸಾರಿ ಬಾವುಟ ಹಾರಿಸಿ ವರ್ಷಾನುಗಟ್ಟಲೇ ಏಳಲಿಲ್ಲ, ಕಪ್ಪು ಬಾವುಟ ಪ್ರದರ್ಶಿಸುವುದು ದೊಡ್ಡದ್ದಲ್ಲ. ಪೊಲೀಸರು, ಚೆಸ್ಕಾಂ ಸಿಬ್ಬಂದಿ ಕಾರ್ಯಕ್ರಮದ ಬಳಿಕ ಮೀಟಿಂಗ್ ಕರೆಯಲಿದ್ದು ಎಲ್ಲರೂ ಹಾಜರಾಗಬೇಕು ಎಂದು ವೇದಿಕೆಯಲ್ಲೇ ಸೂಚಿಸಿದರು. ವೇದಿಕೆ ಎರಡೂ ಬದಿಯಲ್ಲಿ ನಿಂತಿದ್ದ ಮುಖಂಡರಿಗೆ ಖುರ್ಚಿ ಹಾಕಿಸಿ ಯಾರೂ ನಿಲ್ಲಬಾರದು, ಜಂಜಾಟ ಮರೆತು ಕಾರ್ಯಕ್ರಮ ನೋಡಿ ಎಂದು ಸಚಿವರು ಹೇಳಿದರು. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ನಿರಂಜನ ಕುಮಾರ್, ಎನ್.ಮಹೇಶ್ ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.
(ಓದಿ: ದುರ್ಗಾಪೂಜೆ ನಿರ್ವಹಿಸುವ ವಿಶೇಷ ಅರ್ಚಕಿ: ಕಟ್ಟುಪಾಡುಗಳ ಸಂಕೋಲೆ ಕಳಚಿದ ತೃತೀಯ ಲಿಂಗಿ)