ಚಾಮರಾಜನಗರ: ಕಾರ್ಪೊರೇಟ್ ಕಂಪನಿಗಳು ಮನೆ ಬಾಗಿಲಿಗೆ ದಿನಸಿ-ತರಕಾರಿ ಪೂರೈಸುವಂತೆ ರೈತರೇ ಈಗ ಮನೆ ಬಾಗಿಲಿಗೆ ಸೊಪ್ಪು-ತರಕಾರಿ ವಿತರಿಸಲು ಮುಂದಾಗಿದ್ದಾರೆ.
ರೈತ ನಾಯಕ ಪ್ರೊ.ನಂಜುಂಡ ಸ್ವಾಮಿ ಅವರ ಅಮೃತಭೂಮಿ ಹಾಗೂ ರೈತ ಸಂಘ ಸಂಯುಕ್ತವಾಗಿ 'ಭೂಮಿ ಬ್ಯಾಸ್ಕೆಟ್' ಎಂಬ ವಿನೂತನ ಕಾರ್ಯಕ್ರಮದ ಮೂಲಕ ಮಾಸಿಕ ಚಂದಾ ಪಡೆದು ಮನೆ ಬಾಗಿಲಿಗೆ ತಾಜಾ ಸೊಪ್ಪು, 'ನಮ್ದು ಬ್ರಾಂಡ್'ನಡಿ ಇರುವ ತರಕಾರಿ, ಕಾಳುಗಳನ್ನು ಪೂರೈಸಲು ಮುಂದಾಗಿದೆ. ಇನ್ನೆರಡು ದಿನಗಳಲ್ಲಿ 'ಭೂಮಿ ಬ್ಯಾಸ್ಕೆಟ್' ಎಂಬ ಹೋಂ ಡೆಲಿವರಿ ಯೋಜನೆ ಆರಂಭಗೊಳ್ಳಲಿದೆ.
ಪ್ರಾಯೋಗಿಕವಾಗಿ ಚಾಮರಾಜನಗರ ಜಿಲ್ಲಾಕೇಂದ್ರ ಹಾಗೂ ಚಾಮರಾಜನಗರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆರಂಭವಾಗಲಿದ್ದು, ವಾರಕ್ಕೆ ಎರಡು ಬಾರಿ ಗ್ರಾಹಕರ ಮನೆ ಬಾಗಿಲಿಗೆ ಕಡಿಮೆ ದರದಲ್ಲಿ ತಾಜಾ ಸೊಪ್ಪು- ತರಕಾರಿ ಸಿಗಲಿದೆ.
ಮಾಸಿಕ ಚಂದಾ 549 ರೂ.:
ಭೂಮಿ ಬ್ಯಾಸ್ಕೆಟ್ ಲಾಭ ಪಡೆಯಲು ಮಾಸಿಕ 549 ಮಾಸಿಕ ಚಂದಾ ಪಾವತಿಸಬೇಕಿದ್ದು, ರಾಸಾಯನಿಕ ಸಿಂಪಡಿಸದ ಕೊತ್ತಂಬರಿ ಸೊಪ್ಪು, ಕಿಲ್ಕಿರೆ, ಮೆಂತೆ, ಹರಿವೆ, ಸಬ್ಬಸಿಗೆ, ಕರಿಬೇವು, ಪುದಿನ, ಪಾಲಕ್, ಬ್ರಾಹ್ಮಿ,ಅಗಸೆ, ಚಕ್ಕೋತ, ನುಗ್ಗೆ, ಪುಂಡಿ ಸೊಪ್ಪನ್ನು ಮನೆ ಬಾಗಿಲಿಗೆ ತರಿಸಿಕೊಳ್ಳಬಹುದಾಗಿದೆ.
ವಾರಕ್ಕೆ ಎರಡು ಬಾರಿ 7 ಕಟ್ಟು ಸೊಪ್ಪಿನಂತೆ 14 ಕಟ್ಟು ತಿಂಗಳಿಗೆ 54 ಕಟ್ಟು ಸೊಪ್ಪುಗಳನ್ನು ಪಡೆಯಬಹುದಾಗಿದ್ದು, ಚಂದಾದಾರ ಗ್ರಾಹಕರು ಹಿಂದಿನ ದಿನ ವಾಟ್ಸ್ಆ್ಯಪ್ ಮಾಡಿದರೆ ಮಾರನೆ ದಿನ ರೈತರು ಮನೆ ಬಾಗಿಲಿಗೆ ತಂದುಕೊಡಲಿದ್ದಾರೆ. ಇದರೊಟ್ಟಿಗೆ ಸಹಜ ಬೇಸಾಯದಲ್ಲಿ ಬೆಳೆದ ತರಕಾರಿ, ಹಣ್ಣು, ಮನೆಗೆ ಬೇಕಾಗುವ ದಿನಸಿ ಸಾಮಾನುಗಳನ್ನು ಮನೆ ಬಾಗಿಲಿಗೆ ಎಂಆರ್ಪಿ ದರದಲ್ಲಿ ವಿತರಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಮೊ.8904641631 ಸಂಪರ್ಕಿಸಬಹುದು.
ತಾವು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗದೆ ಪರದಾಡುವ ರೈತರು, ಜೊತೆಗೆ ಯೋಗ್ಯ ಆಹಾರ ಸಿಗದೆ ಪರಿತಪಿಸುವ ಗ್ರಾಹಕರಿಗೆ 'ಭೂಮಿ ಬ್ಯಾಸ್ಕೆಟ್' ಉತ್ತಮ ಪರಿಹಾರವಾಗಿದೆ.