ಚಾಮರಾಜನಗರ: ಬೆಳಗಾವಿ ಜಿಲ್ಲೆ ಮೊದಲು ವಿಭಜನೆಯಾಗಲಿ. ಆಮೇಲೆ ಯಾವ ಓಣಿ, ಗಲ್ಲಿನಾದ್ರೂ ಮಾಡಿಕೊಳ್ಳಲಿ ಎಂದು ರಮೇಶ್ ಜಾರಕಿಹೊಳಿಗೆ ಸಚಿವ ಉಮೇಶ್ ಕತ್ತಿ ಟಾಂಗ್ ನೀಡಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರಕ್ಕೆ ಭೇಟಿ ನೀಡಿ ಅವರು ಈ ರೀತಿ ಮಾತನಾಡಿದರು.
ಧಾರವಾಡದಂತೆ ಬೆಳಗಾವಿ ಜಿಲ್ಲೆಯೂ ವಿಂಗಡನೆಯಾಗಲಿ. ಚಿಕ್ಕೋಡಿ, ಬೈಲಹೊಂಗಲ ಹಾಗೂ ಬೆಳಗಾವಿಯಲ್ಲಿ ಎಸಿ ಕಚೇರಿ ಇದ್ದು ಅವುಗಳನ್ನು ಜಿಲ್ಲಾಕೇಂದ್ರ ಮಾಡಲಿ. ಅದಾದ ಬಳಿಕ, ಹುಕ್ಕೇರಿನಾದ್ರೂ ಮಾಡಲಿ, ಗೋಕಾಕ್ ಆದ್ರೂ ಮಾಡಲಿ, ಗಲ್ಲಿ ಮಾಡಲಿ, ಹೋಬಳಿ ಕೇಂದ್ರವನ್ನಾದರೂ ಜಿಲ್ಲೆ ಮಾಡಲಿ ಎಂದು ಗೋಕಾಕ್ ಜಿಲ್ಲೆ ಮಾಡಬೇಕೆಂಬ ಕೂಗಿಗೆ ಉತ್ತರಿಸಿದರು.
ನಾನು ಯಾರ ವಿರುದ್ಧವೂ ಹೋಗಲ್ಲ, ಯಾರ ಜೊತೆಯೂ ಸಂಘರ್ಷಕ್ಕೆ ಹೋಗುವ ವ್ಯಕ್ತಿ ತಾನಲ್ಲ, ಅಭಿವೃದ್ಧಿ ಆಗಬೇಕು ಎಂಬ ದೃಷ್ಟಿಯಿಂದ ಜಿಲ್ಲೆ ವಿಭಜನೆ ಆಗಬೇಕೆಂದು ಕೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಕೋಮು ಸಂಘರ್ಷಕ್ಕೆ ಬಿಜೆಪಿ ಕಾರಣ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಆಗಿದ್ದವರು, ವಯಸ್ಸಾಗಿದ್ದು ರಾಜಕಾರಣದಿಂದ ಅವರು ರಿಟೈರ್ಡ್ ಆಗಲಿ ಎಂದು ತಿರುಗೇಟು ಕೊಟ್ಟರು.
ಇದನ್ನೂ ಓದಿ: 'ತೆಲಂಗಾಣ ಸರ್ಕಾರದಿಂದ ಅವಮಾನ': ಮೋದಿ ಭೇಟಿ ಮಾಡಿದ ರಾಜ್ಯಪಾಲೆ ತಮಿಳಿಸೈ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಳ್ಳೆಯ ಆಡಳಿತ ನೀಡುತ್ತಿದ್ದು, ಇನ್ನು ಒಂದು ವರ್ಷಗಳ ಕಾಲ ಜನಪರ ಆಡಳಿತ ನಡೆಸುತ್ತೇವೆ. ಕೋಮು ಗಲಭೆ, ವಿವಾದಗಳಿಗೂ ಸರ್ಕಾರಕ್ಕೂ ಸಂಬಂಧವಿಲ್ಲ. ಅಭಿವೃದ್ಧಿ ವಿಚಾರಗಳನ್ನಿಟ್ಟುಕೊಂಡು ಜನರ ಮನೆ ಬಾಗಿಲಿಗೆ ಹೋಗುತ್ತೇವೆ, ಮತ್ತೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆನೆಗೆ ಬೆಲ್ಲ-ಮಕ್ಕಳಿಗೆ ಬಾಳೆ, ಹಲಾಲ್ ಕೇಳಿ ಹೌಹಾರಿದ ಕತ್ತಿ: ರಾಂಪುರ ಆನೆ ಶಿಬಿರ ಭೇಟಿ ವೇಳೆ ಒಟ್ಟು 21 ಆನೆಗಳ ಪರಿಚಯ, ಅವುಗಳ ಹಿನ್ನೆಲೆಯ ಮಾಹಿತಿ ಪಡೆದುಕೊಂಡ ಸಚಿವರು ಎಲ್ಲ ಆನೆಗಳಿಗೂ ಕಾಯಿ ಹಾಗೂ ಬೆಲ್ಲ ತಿನ್ನಿಸಿದರು. ಆನೆ ಮರಿಗಳನ್ನು ಹತ್ತಿರ-ಹತ್ತಿರಕ್ಕೆ ಕರೆದು ಎರಡ್ಮೂರು ಬಾರಿ ಬೆಲ್ಲ ತಿನ್ನಿಸಿ ಖುಷಿ ಪಟ್ಟರು. ಆನೆಗಳಿಗೆ ಆಜ್ಞೆ ಕೊಡುವಾಗ ಮಾವುತರು ಹಲಾಲ್, ಹಲಾಲ್ ಎಂಬ ಶಬ್ಧ ಕೇಳಿ ದಿಗಿಲುಗೊಂಡ ಕತ್ತಿ ಏನಿದು ಹಲಾಲ್ ಬೇರೆಯವರಿಗೆ ಗೊತ್ತಾದರೆ ಇದು ವಿವಾದವಾಗುತ್ತಿತ್ತು ಎಂದು ಹಾಸ್ಯ ಚಟಾಕಿ ಹಾರಿಸಿದರು.
ಇನ್ನು, ಗಿರಿಜನ ಮಕ್ಕಳಿಗೆ ಬಿಸ್ಕತ್ತು ವಿತರಿಸಿ ಮಕ್ಕಳ ಕೈಯಲ್ಲಿ ಹಾಡು ಹಾಡಿಸಿ ಖುಷಿಪಟ್ಟರು. ಇದೇ ವೇಳೆ, ಆನೆಗಳು ತಮ್ಮ ವಿವಿಧ ಆಂಗಿಕ ಭಂಗಿಗಳನ್ನು ಪ್ರದರ್ಶಿಸಿದ್ದು, ವಿಶೇಷವಾಗಿತ್ತು.