ಚಾಮರಾಜನಗರ : ಇಲ್ಲಿ ಯಾರೆ ಸತ್ತರೂ ಎಲ್ಲರಿಗೂ ಇರುವುದು ಒಂದೇ ಜಾಗ, ಸತ್ತವರನ್ನ ಹೂಳಬೇಕು ಅಂದ್ರೆ, ಹಿಂದೆ ಸತ್ತವರ ಅಸ್ಥಿಪಂಜರ ತೇಗೆದು ಸುಟ್ಟು ಹೂಳಬೇಕಾದಂತ ಪರಿಸ್ಥಿತಿ ಜಿಲ್ಲೆಯ ದಲಿತರಿಗೆ ಎದುರಾಗಿದೆ.
ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯದ ಡಾ.ಬಿ.ಆರ್.ಅಂಬೇಡ್ಕರ್ ಕಾಲನಿಯ ನಿವಾಸಿಗಳು ಸ್ಮಶಾನ ಇಲ್ಲದೇ ಅಂಗೈ ಅಗಲ ಜಾಗದಲ್ಲೇ ಶವ ಹೂಳಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೇವಲ 8-10 ಗುಂಟೆ ಜಾಗದಲ್ಲಿ ಸತ್ತವರ ಅಸ್ತಿ ಪಂಜರಗಳನ್ನು ಸುಟ್ಟ ಬಳಿಕ ಶವ ಹೂಳಬೇಕಾಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.
ಕಾಲನಿಯಲ್ಲಿ 350 ಕುಟುಂಬಗಳು ವಾಸಿಸುತ್ತಿದ್ದು ಸರ್ಕಾರಿ ಸ್ಮಶಾನ ನೀಡುವಂತೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಅಸ್ತಿಪಂಜರವನ್ನು ಸುಟ್ಟು ಶವ ಹೂಳಬೇಕಾದ ಪರಿಸ್ಥಿತಿ ನಮ್ಮದಾಗಿದೆ ಎಂದು ಕಾಲನಿಯ ಜನರು ಅಳಲು ತೋಡಿಕೊಳ್ಳುತ್ತಾರೆ.