ಚಾಮರಾಜನಗರ: ಪುಟ್ಟ ಪೋರನ ಅಸಾಧಾರಣ ಬುದ್ಧಿಮತ್ತೆ ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಕರ್ನಾಟಕ ಬುಕ್ ಆಫ್ ರೆಕಾರ್ಡ್‌ನಲ್ಲಿ ಈತನ ಹೆಸರು ದಾಖಲಿಸಿ ಗೌರವಿಸಿದೆ. ಜಿಲ್ಲೆಯ ಯಳಂದೂರಿನ ವೈ.ಎನ್. ಮುರುಳಿಕೃಷ್ಣ ಮತ್ತು ಸುವರ್ಣಾ ದಂಪತಿ ಪುತ್ರ ಮೂರೂವರೆ ವರ್ಷದ ಆರುಷ್ ನಾಗರಾಜು ಈ ಪ್ರತಿಭಾವಂತ ಬಾಲಕ. ಈತ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು, ದೇಶದ ರಾಜ್ಯಗಳು ಮತ್ತು ರಾಜಧಾನಿಗಳು, ಹಣ್ಣುಗಳ ಹೆಸರು, ಪ್ರಾಣಿಗಳ ಹೆಸರು, ವಾಹನಗಳ ಹೆಸರುಗಳು, ಹೂವುಗಳು, ಬಣ್ಣಗಳು, ಪಕ್ಷಿಗಳ ಚಿತ್ರಗಳನ್ನು ನೋಡಿದ ಕೂಡಲೇ ಅವುಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದಾನೆ.
ಜೊತೆಗೆ ಸಾಮಾನ್ಯ ವಸ್ತುಗಳ ಹೆಸರು, ದೇಹದ ವಿವಿಧ ಭಾಗಗಳ ಹೆಸರು, ಮಹಾಭಾರತದಲ್ಲಿ ಬರುವ ಪಾತ್ರಗಳು, ವಿವಿಧ ಹಾಡುಗಳನ್ನು ಹೇಳುತ್ತಾನೆ. ಬಾಲಕನ ಅಸಾಧಾರಣ ಬುದ್ಧಿಮತ್ತೆಯನ್ನು ಪರಿಗಣಿಸಿರುವ ಐಬಿಆರ್‌ನವರು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಈತನ ಹೆಸರನ್ನು ದಾಖಲಿಸಿದ್ದಾರೆ. ಜೊತೆಗೆ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ನಲ್ಲೂ ಈತನ ಹೆಸರು ದಾಖಲಿಸಲಾಗಿದೆ.
ಬಹಳ ಬೇಗನೇ ಗ್ರಹಿಸುವ ಶಕ್ತಿಯನ್ನು ಗಮನಿಸಿದ ಬಾಲಕನ ಪೋಷಕರು ವರ್ಣಮಾಲೆಗಳು, ದೇಶದ ರಾಜ್ಯಗಳು - ರಾಜಧಾನಿಗಳು, ವಿಶ್ವದ ವಿವಿಧ ದೇಶಗಳ ಚಾರ್ಟ್ ಗಳನ್ನು ತಂದು ಹೇಳಿಕೊಡಲು ಆರಂಭಿಸಿದ್ದು, ಬಾಲಕನ ಅಸಾಧಾರಣ ಬುದ್ಧಿಮತ್ತೆಗೆ ನೀರೆರೆಯುವ ಕೆಲಸ ಮಾಡುತ್ತಿರುವುದಾಗಿ ಬಾಲಕನ ತಾಯಿ ಸುವರ್ಣಾ ಹೇಳಿದ್ದಾರೆ.
ಓದಿ : ನಟ ಅಜಯ್ ದೇವಗನ್ ವಿರುದ್ಧ ಕರವೇ ಕಾರ್ಯಕರ್ತರ ಪ್ರತಿಭಟನೆ: ಧಿಕ್ಕಾರ ಘೋಷಣೆ