ಚಾಮರಾಜನಗರ: ಲಾಕ್ಡೌನ್ ಆದಾಗಿನಿಂದಲೂ ಕೊರೊನಾ ವಿರುದ್ಧ ಸೆಣಸುತ್ತಿರುವ ವಾರಿಯರ್ಗಳಿಗೂ ಮಹಾಮಾರಿಯ ಆಟ ಅರ್ಥವಾಗಿದ್ದು, ಜಿಲ್ಲೆಯಲ್ಲಿ ಬರೋಬ್ಬರಿ 400ಕ್ಕೂ ಹೆಚ್ಚು ನೌಕರರಿಗೆ ಸೋಂಕು ತಗುಲಿತ್ತು ಎಂದು ತಿಳಿದು ಬಂದಿದೆ.
ಸದ್ಯ ಇರುವ ಅಂಕಿ-ಅಂಶಗಳ ಕುರಿತು ಡಿಹೆಚ್ಒ ಡಾ. ರವಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದು, ಜಿಲ್ಲಾ ಸರ್ಜನ್ ಸೇರಿದಂತೆ 20ಕ್ಕೂ ಹೆಚ್ಚು ವೈದ್ಯರು, 100 ಮಂದಿಗೂ ಅಧಿಕ ಆರೋಗ್ಯ ಸಿಬ್ಬಂದಿಗೆ ಸೋಂಕು ತಗುಲಿತ್ತು. ಇವರಲ್ಲಿ ಬಹುತೇಕ ಮಂದಿ ಮಹಾಮಾರಿ ಗೆದ್ದು ಕಾರ್ಯಕ್ಕೆ ವಾಪಸಾಗಿದ್ದಾರೆ. ಅದೃಷ್ಟವಶಾತ್ ಆರೋಗ್ಯ ಇಲಾಖೆ ಸಿಬ್ಬಂದಿಗಳ್ಯಾರೂ ಅಸುನೀಗಿಲ್ಲ ಎಂದು ತಿಳಿಸಿದರು.
ಇನ್ನು ಪೊಲೀಸ್ ಇಲಾಖೆಯಲ್ಲಿ ಎಸ್ಪಿ ಸೇರಿದಂತೆ 118 ಮಂದಿ ಸಿಬ್ಬಂದಿಗೆ ಕೊರೊನಾ ವಕ್ಕರಿಸಿ ಮೂವರು ಮೃತಪಟ್ಟಿದ್ದು, ಇನ್ನೆಲ್ಲರೂ ಗುಣಮುಖರಾಗಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ 36 ಮಂದಿಗೆ ಕೊರೊನಾ ತಗುಲಿ ಇಬ್ಬರು ಮೃತಪಟ್ಟಿದ್ದಾರೆ. ಮೂವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಬ್ಬರು ಪಿಯು ಉಪನ್ಯಾಸಕರು ಸೋಂಕಿತರಾಗಿ ಕೊರೊನಾ ಜಯಿಸಿದ್ದಾರೆ ಎಂದು ತಿಳಿಸಿದರು.
ಉಳಿದಂತೆ ಪೌರಡಾಳಿತದ ಸಿಬ್ಬಂದಿಯಲ್ಲಿ ಐವರು ಸೋಂಕಿತರಾಗಿ ಒಬ್ಬರು ಮೃತಪಟ್ಟಿದ್ದಾರೆ. ಕೆಎಸ್ಆರ್ಟಿಸಿಯ ಚಾಮರಾಜನಗರ ಉಪ ವಿಭಾಗದಲ್ಲಿ ಬರೋಬ್ಬರಿ 118 ಮಂದಿ ಕೊರೊನಾ ವಕ್ಕರಿಸಿ ಸದ್ಯ 8 ಮಂದಿ ಮಾತ್ರ ಗುಣಮುಖರಾಗಬೇಕಿದೆ. ಉಳಿದವರು ಕರ್ತವ್ಯಕ್ಕೆ ಮರಳಿದ್ದಾರೆ ಎಂದು ಡಿಹೆಚ್ಒ ಹೇಳಿದರು.
ಈಗಾಗಲೇ ಎಲ್ಲಾ ಇಲಾಖೆಗಳಿಗೆ ಪತ್ರ ಬರೆದು ಕೊರೊನಾ ಸೋಂಕಿತರಾದ ನೌಕರರು, ಗುಣಮುಖರಾದವರ ಮಾಹಿತಿ ಕೊಡಬೇಕೆಂದು ತಿಳಿಸಲಾಗಿದೆ. ಈಗಿರುವ ಮಾಹಿತಿ ಪ್ರಕಾರ 400ಕ್ಕೂ ಹೆಚ್ಚು ಸರ್ಕಾರಿ ನೌಕರರಲ್ಲಿ ವೈರಸ್ ಕಾಣಿಸಿಕೊಂಡಿತ್ತು ಎಂದು ತಿಳಿದು ಬಂದಿದೆ ಎಂದು ವಿವರಿಸಿದರು.