ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿಗೆ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟಿದ್ದರು. ಅದು ಸರ್ಕಾರಿ ಕಾರ್ಯಕ್ರಮವಾಗಿತ್ತು. ಆದ್ರೆ ಇದೀಗ ಗುಂಡ್ಲುಪೇಟೆಗೆ ಚುನಾವಣಾ ಪ್ರಚಾರಕ್ಕಾಗಿ ಅಮಿತ್ ಶಾ ಆಗಮಿಸುತ್ತಿದ್ದಾರೆ.
ಸೋಮವಾರ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೆ ಚುನಾವಣಾ ಚಾಣಕ್ಯ ಅಮಿತ್ ಶಾ ಭೇಟಿ ಕೊಡಲಿದ್ದು, ಮೆಗಾ ರೋಡ್ ಶೋ ನಡೆಸಿ ಮತಬೇಟೆ ನಡೆಸಲಿದ್ದಾರೆ. ಬಿಜೆಪಿ ಹಾಲಿ ಶಾಸಕ ನಿರಂಜನಕುಮಾರ್ ಪರ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ. ಗುಂಡ್ಲುಪೇಟೆ ಪಟ್ಟಣದ ಡಿ. ದೇವರಾಜ ಅರಸ್ ಕ್ರೀಡಾಂಗಣಕ್ಕೆ ಹೆಲಿಕಾಪ್ಟರ್ನಲ್ಲಿ ಬಂದಿಳಿಯಲಿರುವ ಅಮಿತ್ ಶಾ 11.30 ರಿಂದ 12.30 ರವರೆಗೆ ರೋಡ್ ಶೋ ಮೂಲಕ ಪ್ರಚಾರ ಕೈಗೊಳ್ಳಲಿದ್ದಾರೆ.
ಅಮಿತ್ ಶಾ ಬಳಿಕ ಜಿಲ್ಲೆಗೆ ಪ್ರಿಯಾಂಕಾ ಗಾಂಧಿ: ಇನ್ನು, 25 ರಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹನೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ಮತ ಶಿಕಾರಿ ನಡೆಸಲಿದ್ದಾರೆ. 25 ರ ಮಧ್ಯಾಹ್ನ 2 ರಿಂದ 4 ರವರೆಗೆ ಸಮಾವೇಶ ನಡೆಯಲಿದ್ದು, ಸುರ್ಜೇವಾಲ ಮತ್ತು ಡಿಕೆಶಿ ಸೇರಿ ಹಲವರು ಭಾಗಿಯಾಗಲಿದ್ದಾರೆ. ಗ್ಯಾರಂಟಿ ಕಾರ್ಡ್ ಘೋಷಣೆ ಬಳಿಕ ರಾಜ್ಯಕ್ಕೆ ಬರುತ್ತಿರುವ ಪ್ರಿಯಾಂಕಾ ಹಳೇ ಮೈಸೂರು ಭಾಗದಿಂದಲೇ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ.
ಸೋಮಣ್ಣ ಪ್ರಚಾರ ಅಂತ್ಯ: ಕಳೆದ ಮೂರು ದಿನಗಳಿಂದ ಚಾಮರಾಜನಗರದಲ್ಲಿ ಬೀಡುಬಿಟ್ಟು ಮತ ಬೇಟೆ ನಡೆಸುತ್ತಿದ್ದ ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರ ಎರಡನೇ ಹಂತದ ಪ್ರಚಾರ ಶನಿವಾರ ಮುಕ್ತಾಯಗೊಂಡಿದೆ. ಭಾನುವಾರದಿಂದ ವರುಣಾದಲ್ಲಿ ಸೋಮಣ್ಣ ಪ್ರಚಾರ ನಡೆಸಲಿದ್ದು, ಬಳಿಕ ಅವರು ಬೆಂಗಳೂರಲ್ಲೂ ಮತಯಾಚನೆ ನಡೆಸಲಿದ್ದಾರೆ. ಕಳೆದ 3 ದಿನಗಳಿಂದ 60ಕ್ಕೂ ಹೆಚ್ಚು ಗ್ರಾಮಗಳಿಗೆ ಸೋಮಣ್ಣ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಇಂದು ರಾಜ್ಯಕ್ಕೆ ಮತ್ತೆ ಅಮಿತ್ ಶಾ ಆಗಮನ: ಚಾಮುಂಡೇಶ್ವರಿ ದರ್ಶನ ಪಡೆದು ಪ್ರಚಾರ ಆರಂಭಿಸಲಿರುವ ಬಿಜೆಪಿ ಚಾಣಕ್ಯ
ಅಮಿತ್ ಶಾ ಮೈಸೂರು ಪ್ಲಾನ್ಗಳೇನು: ಇಂದು ರಾಜ್ಯಕ್ಕೆ ಆಗಮಿಸಲಿರುವ ಅಮಿತ್ ಶಾ ಅವರು 2 ದಿನಗಳ ಕಾಲ ಮತ ಪ್ರಚಾರದಲ್ಲಿ ನಿರತರಾಗಲಿದ್ದಾರೆ. ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾದ ಜಗದೀಶ್ ಶೆಟ್ಟರ್ ಕಣಕ್ಕೆ ಇಳಿದಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಮತ ಬಿಜೆಪಿ ಕೈ ತಪ್ಪಬಾರದೆಂದು ಅಮಿತ್ ಶಾ ಮಾಸ್ಟರ್ ಪ್ಲಾನ್ ಯೋಜಿಸಲಿದ್ದಾರೆ. ಇಂದು ಸಂಜೆ ಮೈಸೂರಿಗೆ ಆಗಮಿಸಲಿದ್ದು, ಇಲ್ಲಿನ ಹಳೆ ಮೈಸೂರು ಭಾಗ ಹಾಗೂ ಮಧ್ಯ ಕರ್ನಾಟಕದಲ್ಲಿ ಸೋಮವಾರ ಪ್ರಚಾರ ಕೈಗೊಳ್ಳಲಿದ್ದಾರೆ.
ಹಾಗೆ ಇಂದು ರಾತ್ರಿ 9.30ಗೆ ಮೈಸೂರಿನ ರಾಡಿಸನ್ ಹೋಟೆಲ್ನಲ್ಲಿ ಗೃಹಸಚಿವರು ತಂಗಲಿದ್ದು, ನಾಳೆ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಜೊತೆಗೆ ಗುಂಡ್ಲು ಪೇಟೆಯಲ್ಲಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯ ನಡೆಸಿ, ಅಲ್ಲಿಂದ ಹಾಸನದ ಸಕಲೇಶಪುರದಲ್ಲಿ ಕೂಡ ರೋಡ್ ಶೋ ನಡೆಸಿ ನಂತರ ಮೈಸೂರಿಗೆ ಮೈಸೂರಿಂದ ಹುಬ್ಬಳ್ಳಿಗೆ ತೆರಳಲಿದ್ದಾರೆ.
ಇದನ್ನೂ ಓದಿ: ದ.ಕ ಜಿಲ್ಲೆಯ ಮೂವರು ಬಿಜೆಪಿ ನಾಯಕರು ಸಿಡಿ ರಿಲೀಸ್ ಮಾಡಬಾರದೆಂದು ತಡೆಯಾಜ್ಞೆ ತಂದಿದ್ದೇಕೆ?: ಡಿಕೆಶಿ