ಚಾಮರಾಜನಗರ: ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ, ಮಧ್ಯಂತರ ಚುನಾವಣೆ ಬಂದರೂ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಹೇಳಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಪತ್ರಕರ್ತರೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, 5 ವರ್ಷ ಶಾಸಕನಾಗಿ, 10 ವರ್ಷ ಸಂಸದನಾಗಿ ಉತ್ತಮ ಕಾರ್ಯ ಮಾಡಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಅಲ್ಪ ಮತದಿಂದ ಸೋತರೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ಉಪಚುನಾವಣೆಯಲ್ಲಿ ಆಪರೇಷನ್ ಕಮಲ ಕೆಲಸ ಮಾಡುವುದಿಲ್ಲ. ಪಕ್ಷ ಬಿಟ್ಟವರಿಗೆ ತಕ್ಕ ಶಾಸ್ತಿ ಆಗಲಿದ್ದು, ಕಾಂಗ್ರೆಸ್ಗೆ ಉತ್ತಮ ವಾತಾವರಣವಿದೆ ಎಂದರು. ಅನರ್ಹ ಶಾಸಕರ ಕುರಿತ ಸುಪ್ರೀಂ ತೀರ್ಪು ರಾಜ್ಯ ರಾಜಕಾರಣದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಬಿಎಸ್ವೈ ಅವರು ಸ್ವತಂತ್ರವಾಗಿ ಆಡಳಿತ ನಡೆಸಲು ಹೈಕಮಾಂಡ್ ಬಿಡುತ್ತಿಲ್ಲ. ಹಿರಿಯರನ್ನು ಕಡೆಗಣಿಸಲಾಗಿದೆ. ಶೀಘ್ರವೇ ಕಾಂಗ್ರೆಸ್ ವಿಪಕ್ಷ ನಾಯಕನನ್ನು ನೇಮಕ ಮಾಡಲಿದೆ.
ಬೇಡವೆಂದರೂ ಪಕ್ಷ ನನ್ನನ್ನು ರಾಜ್ಯ ಕಾಂಗ್ರೆಸ್ ವಕ್ತಾರನನ್ನಾಗಿ ಮಾಡಿದ್ದು, ರಾಜ್ಯಾದ್ಯಂತ ಸುತ್ತಿ ಪಕ್ಷ ಸಂಘಟನೆ ಮಾಡುವ ಜೊತೆಗೆ ರಾಜ್ಯದ ಎಲ್ಲ ಪ್ರದೇಶಗಳನ್ನು ನೋಡುವ ಸೌಭಾಗ್ಯ ದೊರೆತಿದೆ ಎಂದು ತಿಳಿಸಿದರು.