ಚಾಮರಾಜನಗರ: ಚಾಮರಾಜನಗರ ಜಿಲ್ಲಾಸ್ಪತ್ರೆ ಸಿಬ್ಬಂದಿ ಮರಣೋತ್ತರ ಪರೀಕ್ಷೆಯಲ್ಲೂ ಹಣ ಮಾಡುವ ದಂಧೆಗೆ ಇಳಿದಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ. ಮರಣೋತ್ತರ ಪರೀಕ್ಷೆ ಮಾಡಲು 25 ಸಾವಿರ ರೂ.ಗೆ ಬೇಡಿಕೆ ಇಟ್ಟು ಎಡವಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.
ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪ ಗುರುವಾರ ನಡೆದಿದ್ದ ಕೇರಳ ಪ್ರವಾಸಿಗರ ಕಾರು ಅಪಘಾತದಲ್ಲಿ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಲು 25 ಸಾವಿರ ರೂ.ಗೆ ಬೇಡಿಕೆ ಇಟ್ಟು, ಹಣ ನೀಡುವ ತನಕ ಪರೀಕ್ಷೆ ನಡೆಸಲ್ಲ ಎಂದು ಶುಕ್ರವಾರ ಸಂಜೆವರೆಗೆ ಕಾಲ ದೂಡಿದ್ದಾರೆ. ಈ ವಿಚಾರ ತಿಳಿದ ಆರ್ಎಸ್ಎಸ್ ಕಾರ್ಯಕರ್ತರು ಜಿಲ್ಲಾಸ್ಪತ್ರೆಗೆ ದೌಡಾಯಿಸಿ ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಬಳಿಕ ಮರಣೋತ್ತರ ಪರೀಕ್ಷೆ ಮಾಡಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಬಿಜೆಪಿ ಮುಖಂಡ ವೃಷಬೇಂದ್ರಪ್ಪ ಮಾತನಾಡಿ, ಗುರುವಾರ ಮಧ್ಯಾಹ್ನ ಶವವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದರೂ 25 ಸಾವಿರ ರೂ. ಹಣಕ್ಕೆ ಡಿಮ್ಯಾಂಡ್ ಇಟ್ಟು, ಮೃತನ ಸಂಬಂಧಿಕರಿಂದ ಆಸ್ಪತ್ರೆ ಸಿಬ್ಬಂದಿ 5 ಸಾವಿರ ರೂ. ಪಡೆದು ಮರಣೋತ್ತರ ಪರೀಕ್ಷೆ ಮಾಡಲು ವಿಳಂಬ ಮಾಡುತ್ತಿದ್ದರು. ನಾವು ಕಾರ್ಯಕರ್ತರು ತೆರಳಿ ಪೊಲೀಸರ ಮೂಲಕ ಬುದ್ಧಿವಾದ ಹೇಳಿಸಿ ಪರೀಕ್ಷೆ ನಡೆಸಿದೆವು. ಜೊತೆಗೆ, ಅವರಿಂದ ಪಡೆದಿದ್ದ 5 ಸಾವಿರ ರೂ.ಅನ್ನು ಹಿಂತಿರುಗಿಸಿ ಕೊಡಿಸಿದ್ದೇವೆ. ಆಸ್ಪತ್ರೆಯಲ್ಲಿ ಈ ರೀತಿಯ ಘಟನೆಗಳು ಆಗದಂತೆ ಡೀನ್, ಜಿಲ್ಲಾ ಸರ್ಜನ್ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: ಹಂದಿ ಫಾರ್ಮ್ನಿಂದ ದುರ್ನಾತ.. ಸುಳ್ಯ ದೇವಸ್ಥಾನ ಅಪವಿತ್ರವಾಗುತ್ತಿರುವ ಆರೋಪ
ಈ ಸಂಬಂಧ ಜಿಲ್ಲಾ ಸರ್ಜನ್ ಶ್ರೀನಿವಾಸ್ ಮಾತನಾಡಿ, ಡಿ ಗ್ರೂಪ್ ನೌಕರರೊಬ್ಬರು ಮರಣೋತ್ತರ ಪರೀಕ್ಷೆ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಬಂದಿದೆ. ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮರಣೋತ್ತರ ಪರೀಕ್ಷೆ ನಡೆಸಲು 25 ಸಾವಿರ ರೂ. ಕೇಳಿದ್ದಾರೆಂಬುದು ನನಗೇನೇ ಅಚ್ಚರಿ ಉಂಟು ಮಾಡಿದೆ ಎಂದರು.