ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿದ್ದ ಅಕ್ಕಿರಾಜ ಅಲಿಯಾಸ್ ವಿನಾಯಕ ಎಂಬ ಆನೆ ಮಂಗಳವಾರ ಸಾವನ್ನಪ್ಪಿದೆ. ಕೊಯಮತ್ತೂರಿನಲ್ಲಿ ಉಪಟಳ ಕೊಡುತ್ತಿದ್ದ ಈ ಆನೆಯನ್ನು ಸೆರೆಹಿಡಿದು ಮಧುಮಲೈ ಅರಣ್ಯ ಪ್ರದೇಶದಲ್ಲಿ ಬಿಡಲಾಗಿತ್ತು. ಅದಾದ ಬಳಿಕ, ಈ ಆನೆ ಎಲಚೆಟ್ಟಿ ಗ್ರಾಮದತ್ತ ಬಂದು ಅಕ್ಕಿ ತಿನ್ನುವುದನ್ನು ರೂಢಿಸಿಕೊಂಡಿತ್ತು.
ಕಳೆದ ಜೂನ್ನಲ್ಲಿ ಅಂದಾಜು 30 ವರ್ಷದ ಈ ಆನೆಯನ್ನು ಎಲಚೆಟ್ಟಿ ಭಾಗದಲ್ಲಿ ಸೆರೆಹಿಡಿದು ರಾಂಪುರ ಆನೆ ಶಿಬಿರಕ್ಕೆ ಕರೆತರಲಾಗಿತ್ತು. ನೋಡಲು ಸುಂದರ ಹಾಗು ಅಗಲ ಸಮತಟ್ಟಾದ ಬೆನ್ನು ಹೊಂದಿದ್ದರಿಂದ ದಸರಾಗೆ ಪಳಗಿಸಲಾಗುತ್ತಿತ್ತು. ವೈದ್ಯರು ಗ್ಲುಕೋಸ್ ಹಾಗೂ ಇನ್ನಿತರ ಉಪಚಾರ ಮಾಡಿದರೂ ಸ್ಪಂದಿಸದೇ ಅಸುನೀಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪರಿಸರ ಹೋರಾಟಗಾರ ಜೋಸೆಫ್ ಹೂವರ್, ಆನೆಯ ಶವ ಪರೀಕ್ಷೆಯನ್ನು ಉನ್ನತ ಮಟ್ಟದಲ್ಲಿ ನಡೆಸಬೇಕು ಎಂದು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಮೇ ತಿಂಗಳಲ್ಲಿ ಸಾವನ್ನಪ್ಪಿತ್ತು ಬಲರಾಮ ಆನೆ: ನಾಡಹಬ್ಬ ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತು ದಾಖಲೆ ನಿರ್ಮಿಸಿದ್ದ 67 ವರ್ಷದ ಬಲರಾಮ ಆನೆ ಅನಾರೋಗ್ಯದಿಂದ ಸಾವನ್ನಪ್ಪಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹುಣಸೂರು ಅರಣ್ಯ ವ್ಯಾಪ್ತಿಯ ಹನಗೂಡು ಬಳಿಯ ಭೀಮನಕಟ್ಟೆ ಬಳಿಯ ಅರಣ್ಯ ಶಿಬಿರದಲ್ಲಿ ಆರೈಕೆ ಮಾಡಲಾಗುತ್ತಿತ್ತು. ಆದರೆ ಕೆಲವು ದಿನಗಳ ಕಾಲ ಆಹಾರ ನೀರು ಸೇವಿಸಿದರೂ ವಾಂತಿ ಮಾಡುತ್ತಿತ್ತು. ಕ್ಷಯರೋಗದಿಂದೂ ಬಳಲಿ ಕೊನೆಗೆ ಅಸುನೀಗಿದೆ.
ಇದನ್ನೂ ಓದಿ: ವಾಕಿಂಗ್ ಮಾಡುವಾಗ ಹಠಾತ್ತನೆ ಕುಸಿದುಬಿದ್ದು ಆನೆ ಸಾವು.. ಕಂಬನಿ ಮಿಡಿದ ಜನ