ಚಾಮರಾಜನಗರ: ಬಿಸಿಲ ಬೇಗೆಗೆ ಕಂಗೆಟ್ಟು ಕುಡಿಯಲು ನೀರು ಸಿಗದೇ ಪರದಾಡುತ್ತಿದ್ದ ಜನರು ಕೆಲವೇ ದಿನಗಳಲ್ಲಿ ಉಚಿತ ಶುದ್ಧ ಕುಡಿಯುವ ನೀರನ್ನು ನಗರದ ವಿವಿಧೆಡೆ ಪಡೆಯಬಹುದಾಗಿದೆ.
ಹೌದು.. ತಾಪಮಾನ ಏರಿಕೆಯಿಂದ ತತ್ತರಿಸುವ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ನೀರು ಸಿಗದೇ ಜನರು ಹೈರಣಾಗಿರುವ ಪರಿಸ್ಥಿತಿ ಬಗ್ಗೆ ಈಟಿವಿ ಭಾರತ ವರದಿ ಮಾಡಿದ್ದ ಬೆನ್ನಲ್ಲೇ ಯೋಜನಾ ನಿರ್ದೇಶಕ ಕೆ. ಸುರೇಶ್ ಅಧಿಕಾರಿಗಳ ಸಭೆ ನಡೆಸಿದ್ದು, ಜನಸಂದಣಿ ಪ್ರದೇಶಗಳು, ಸರ್ಕಾರಿ ಕಚೇರಿಗಳಲ್ಲಿ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದಾರೆ.
ಈ ಸಂಬಂಧ ಯೋಜನಾ ನಿರ್ದೇಶಕ ಸುರೇಶ್, ಈಟಿವಿ ಭಾರತದೊಂದಿಗೆ ಮಾತನಾಡಿ, ಮಾರ್ಚ್ ಅಂತ್ಯದ ವೇಳೆಗೆ ಅನುದಾನ ಬರುವ ನಿರೀಕ್ಷೆ ಇದ್ದು, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುವುದು, ಸಾರ್ವಜನಿಕರು ತೀರಾ ತೊಂದರೆಗೀಡಾಗುತ್ತಿರುವ ಸ್ಥಳಗಳನ್ನು ಗುರುತಿಸಿ ಸ್ಥಳೀಯ ಆಡಳಿತದ ವತಿಯಿಂದ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಓದಿ : ಚಾಮರಾಜನಗರದಲ್ಲಿ 'ಸಂವಿಧಾನ ಓದು' ಪುಸ್ತಕ ವಿತರಣಾ ಸಮಾರಂಭ ಇಂದು
ಒಟ್ಟಿನಲ್ಲಿ, ಜನಸಾಮಾನ್ಯರಿಗೆ ಕೆಲವೇ ದಿನಗಳಲ್ಲಿ ಕುಡಿಯಲು ನೀರು ಸಿಗುವ ಭರವಸೆ ಇದ್ದು, ಅಧಿಕಾರಿಗಳು ಸೂಕ್ಷ್ಮಗ್ರಾಹಿಗಳಾಗಿ ಕಾರ್ಯ ನಿರ್ವಹಿಸಬೇಕಿದೆ. ನೀರಿನ ಸಮಸ್ಯೆ ಕುರಿತು ಎರಡು ದಿನಗಳ ಹಿಂದೆ ಈಟಿವಿ ಭಾರತ ಸುದ್ದಿ ಬಿತ್ತರಿಸಿತ್ತು. ಅದೇ ದಿನ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ವರದಿ ಕಂಡು 1 ವಾರದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸದಿದ್ದರೆ ಪ್ರತಿಭಟಿಸುವ ಎಚ್ಚರಿಕೆ ಕೊಟ್ಟಿದ್ದರು.