ಚಾಮರಾಜನಗರ: ಇತ್ತೀಚಿಗೆ ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘದ ಒಕ್ಕೂಟದಲ್ಲಿನ ಉದ್ಯೋಗ ನೇಮಕಾತಿಯಲ್ಲಿ ಭಾರಿ ಗೋಲ್ಮಾಲ್ ನಡೆದಿದೆ ಎಂದು ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿ ಆರೋಪಿಸಿದೆ.
ಈ ಸಂಬಂಧ ನಗರದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಕೆ. ವೀರಭದ್ರಸ್ವಾಮಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಚಾಮುಲ್ನಲ್ಲಿ ಖಾಲಿ ಇರುವ ವಿವಿಧ 72 ಉದ್ಯೋಗಗಳ ನೇಮಕಾತಿಗೆ ಆನ್ಲೈನ್ ನಲ್ಲಿ ಅರ್ಜಿ ಆಹ್ವಾನಿಸಿ, ಖಾಸಗಿ ಎಜೆನ್ಸಿ ಪರೀಕ್ಷೆ ನಡೆಸಿತ್ತು. ಆದ್ರೆ ಇದರಲ್ಲಿ 10 -15 ಕೋಟಿ ರೂ. ಅವ್ಯವಹಾರವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೋಸವಾಗಿದೆ ಎಂದು ಗಂಭೀರ ಆರೋಪ ಮಾಡಿದ್ರು.
ಹಣ ನೀಡಿದ ವಿದ್ಯಾರ್ಥಿಗಳಿಂದ ಪರೀಕ್ಷೆಯಲ್ಲಿ ಖಾಲಿ ಉತ್ತರಪತ್ರಿಕೆಯನ್ನು ಪಡೆದು ಎಜೆನ್ಸಿಯವರೇ ಉತ್ತರ ತುಂಬಿದ್ದಾರೆ. ಪರೀಕ್ಷೆ ಬರೆದವರಿಗೆ ಓಎಂಆರ್ ಪ್ರತಿಯನ್ನು ನೀಡಿಲ್ಲ, ಎಷ್ಟು ಅಂಕ ಬಂದಿದೆ ಎಂದೂ ಹೇಳದೆ ಈಗ 1:5 ಅಡಿ ಸಂದರ್ಶನಕ್ಕೆ ಕರೆದಿದ್ದಾರೆ. ಚಾಮುಲ್ ಅಧ್ಯಕ್ಷ ಗುರುಮಲ್ಲಪ್ಪ ಅವರ ಮೊಮ್ಮಗನಿಗೇ ಮೊದಲ ಉದ್ಯೋಗ ನೀಡಿದ್ದು, ಪಾರದರ್ಶಕತೆ ಇಲ್ಲವೆಂದು ಕಿಡಿಕಾರಿದರು.
ಸಮಿತಿಯ ಗೌರವಾಧ್ಯಕ್ಷ ವೆಂಕಟಮಣ ಮಾತನಾಡಿ, ಲಂಚಾವತಾರದ ನೇಮಕಾತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೋಸವಾಗಿದ್ದು ಕೂಡಲೇ ನೇಮಕಾತಿಯನ್ನು ತಡೆ ಹಿಡಿಯಬೇಕು. ಈ ಹಿಂದಿನ ಚಾಮುಲ್ ಎಂಡಿ ವಿಜಯಕುಮಾರ್, ಈಗಿನ ಎಂಡಿ ಮಲ್ಲಿಕಾರ್ಜುನ, ಆಡಳಿತಾಧಿಕಾರಿ ಶ್ರೀಕಾಂತ್ ಮತ್ತು ಅಧ್ಯಕ್ಷ ಶಿವಮಲ್ಲಪ್ಪ ಈ ಭ್ರಷ್ಟಾಚಾರದಲ್ಲಿ ತೊಡಗಿದ್ದು ಕೂಡಲೇ ತನಿಖೆಯಾಗಬೇಕು, ಪರೀಕ್ಷಾ ಪ್ರಾಧಿಕಾರದ ವತಿಯಿಂದ ಪುನರ್ ಪರೀಕ್ಷೆ ನಡೆಯಬೇಕು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.