ಚಾಮರಾಜನಗರ: ಅನವಶ್ಯಕವಾಗಿ ವ್ಯಕ್ತಿಯೊಬ್ಬನಿಗೆ ಎಎಸ್ಐ ಕಪಾಳ ಮೋಕ್ಷ ಮಾಡಿರುವ ಘಟನೆ ಕೊಳ್ಳೇಗಾಲದ ಸತ್ತೇಗಾಲ ಚೆಕ್ ಪೋಸ್ಟ್ನಲ್ಲಿ ನಡೆದಿರುವ ಆರೋಪ ಕೇಳಿ ಬಂದಿದೆ.
ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿನ ಎಎಸ್ಐ ರವಿ ಎಂಬವರು ಶಿವನ ಸಮುದ್ರದ ನಟರಾಜ್ ಎಂಬವರ ಮೇಲೆ ಹಲ್ಲೆ ಮಾಡಿ ಅವರ ಪತ್ನಿ ದಾಕ್ಷಾಯಿಣಿ ಎಂಬುವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.
ದಾಕ್ಷಾಯಿಣಿ ಅವರು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದು, ಶುಕ್ರವಾರ ಮೆಡಿಕಲ್ ಎಮರ್ಜೆನ್ಸಿ ಪಾಸ್ ಮೂಲಕ ಸಂಬಂಧಿಯೊಬ್ಬರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಹಿಂತಿರುಗುವಾಗ ಶಿವನಸಮುದ್ರದ ಮನೆಗೆ ತೆರಳಲು ಸಂಬಂಧಿಕರ ಕಾರನ್ನು ಹಂಪಾಪುರಕ್ಕೆ ಕಳುಹಿಸಿ ಚೆಕ್ಪೋಸ್ಟ್ನಲ್ಲೇ ಪತಿ ಕಾಯುತ್ತಿದ್ದ ನಟರಾಜ್ಗೆ ಏಕಾಏಕಿ ಕಪಾಳ ಮೋಕ್ಷ ಮಾಡಿ, ದಾಕ್ಷಾಯಿಣಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.
ಸದ್ಯ ಕಪಾಳ ಮೋಕ್ಷದಿಂದ ಕಿವಿ ಕೇಳದಂತಾಗಿ, ತಲೆ ನೋವಿನಿಂದ ಬಳಲಿ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ನಟರಾಜ್, ಪತ್ನಿಯ ಮೂಲಕ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಎಎಸ್ಐ ವಿರುದ್ಧ ದೂರು ದಾಖಲಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.