ಕೊಳ್ಳೇಗಾಲ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ 14 ವರ್ಷದ ಬಾಲಕಿ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿರುವ ಘಟನೆ ನಡೆದಿದೆ.
ತಾಲೂಕಿನ ಪಾಳ್ಯ ಗ್ರಾಮದ ಬಾಲಕಿಯೊಬ್ಬಳು ತಾಯಿಯಾಗಿದ್ದಾಳೆ. ಈ ಸಂಬಂಧ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಅವರು ಅಪ್ರಾಪ್ತ ಬಾಲಕಿಯೊಬ್ಬಳು ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದು, ಏಪ್ರಿಲ್ 14 ರ ಸಂಜೆ 7.50 ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ವೈದ್ಯಾಧಿಕಾರಿಗಳು ಪೊಲೀಸ್ ಠಾಣೆಗೆ ಅಪ್ರಾಪ್ತ ಬಾಲೆ ತಾಯಿ ಆಗಿರುವ ಬಗ್ಗೆ ಮೆಮೋ ಕಳುಹಿಸಿದಾಗ, ಬಾಲಕಿಯೂ ವಿವಾಹವಾಗಿರುವ ಆಕೆಯ ಗಂಡ ರಮೇಶನ ಮೇಲೆ ಪೊಸ್ಕೋ ಕಾಯಿದೆಯಡಿ ಮೊಕದ್ದಮೆ ದಾಖಲು ಮಾಡಲು, ಗ್ರಾಮಾಂತರ ಠಾಣೆ ಎಸ್.ಐ ಅಶೋಕ್ ಅವರು ಬಾಲಕಿ ಹೇಳಿಕೆ ಪಡೆದಿದ್ದಾರೆ. ಹೇಳಿಕೆಯಲ್ಲಿ ನನ್ನ ತಂದೆ ತಾಯಿ ಚಿಕ್ಕಂದಿನಲ್ಲೇ ಬಿಟ್ಟು ಹೋಗಿರುತ್ತಾರೆ. ನಾನು ನನ್ನ ಅಜ್ಜಿ ಮನೆಯಲ್ಲಿದ್ದಾಗ, ಇದೇ ಗ್ರಾಮದ ರಮೇಶನನ್ನು ಪ್ರೀತಿ ಮಾಡಿ, ಅಜ್ಜಿಯ ಒಪ್ಪಿಗೆ ಪಡೆದು ದೇವಸ್ಥಾನದಲ್ಲಿ ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ.
ಈಗ ಹೆರಿಗೆಗೆ ಬಂದಾಗ ನಾನು ಅಪ್ರಾಪ್ತ ಬಾಲಕಿಯಾಗಿ ಮಗುವಿಗೆ ತಾಯಿಯಾಗಿರುವುದು ಅಪರಾಧ ಎಂದು ಗೊತ್ತಾಯಿತು. ನಾನು ವಿದ್ಯಾವಂತಳಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ್ಯಾಯಾಧೀಶರ ಆದೇಶ ಬಂದ ನಂತರ ಈ ಬಗ್ಗೆ ತನಿಖೆ ಮುಂದುವರೆಸುವುದಾಗಿ ಸಿಪಿಐ ಶ್ರೀಕಾಂತ್ ತಿಳಿಸಿದ್ದಾರೆ.