ಚಾಮರಾಜನಗರ : ಚಲಿಸುತ್ತಿದ್ದ ಬಸ್ಗೆ ವ್ಯಕ್ತಿಯೋರ್ವ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಚಾಮರಾಜನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ ನಡೆದಿದೆ. ಚಾಮರಾಜನಗರ ತಾಲೂಕಿನ ಯಾಲಕ್ಕೂರು ಗ್ರಾಮದ ರಂಗಸ್ವಾಮಿ (34) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.
ಚಾಮರಾಜನಗರ ಬಸ್ ನಿಲ್ದಾಣದಿಂದ ಮೈಸೂರಿನತ್ತ ತೆರಳುತ್ತಿದ್ದಾಗ ರಸ್ತೆ ಬದಿ ನಿಂತಿದ್ದ ರಂಗಸ್ವಾಮಿ ಹಿಂಬದಿ ಚಕ್ರಕ್ಕೆ ಹಾರಿದ್ದಾನೆ. ಇದನ್ನು ಚಾಲಕ ಗಮನಿಸಿ ಬ್ರೇಕ್ ಹಾಕಿದರಾದರೂ ಈತನ ಮೇಲೆ ಗಾಲಿ ಹತ್ತಿದ್ದರಿಂದ ಸ್ಥಳದಲ್ಲೇ ಅಸುನೀಗಿದ್ದಾನೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಘಟನೆಯನ್ನು ಕಂಡ ಸಾರ್ವಜನಿಕರು ಕ್ಷಣ ಕಾಲ ವಿಚಲಿತರಾಗಿದ್ದಾರೆ. ಮಾಹಿತಿ ಅರಿತ ಚಾಮರಾಜನಗರ ಟ್ರಾಫಿಕ್ ಠಾಣೆ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇನ್ನು ಆತ್ಮಹತ್ಯೆ ದೃಶ್ಯ ಅಂಗಡಿಯೊಂದರ ಮುಂಭಾಗ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
(ಪ್ರತ್ಯೇಕ ಪ್ರಕರಣ) ಪೋಷಕರ ಬುದ್ಧಿವಾದಕ್ಕೆ ಮನನೊಂದು 14 ವರ್ಷದ ಬಾಲಕ ಆತ್ಮಹತ್ಯೆ: ಕಳೆದ ಎರಡು ದಿನ ಹಿಂದೆ ದೀಪಾವಳಿ ಹಬ್ಬದ ರಜೆ ಇದೆ ಎಂದು ಸುಮ್ಮನೆ ಹೊರಗಡೆ ತಿರುಗಾಡಬೇಡ, ಓದಿನ ಕಡೆಯೂ ಗಮನ ಹರಿಸುವಂತೆ ಪೋಷಕರು ಬುದ್ಧಿವಾದ ಹೇಳಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ಮಗ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದದಲ್ಲಿ ಇತ್ತೀಚೆಗೆ ನಡೆದಿತ್ತು. ತಮ್ಮ ಮನೆಯ ಮಹಡಿಯ ಮೇಲಿನ ರೂಮಿನಲ್ಲಿ 14 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಬಾಲಕ ಮೂಡಲಗಿಯ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ. ಇನ್ನು ಒಂದು ದಿನದಲ್ಲಿ ಶಾಲೆ ಪ್ರಾರಂಭವಾಗುತ್ತದೆ. ಸರಿಯಾಗಿ ಓದಿಕೊ ಎಂದು ಪೋಷಕರು ಬುದ್ಧಿವಾದ ಹೇಳಿದ ಬಳಿಕ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಮಗನ ಸಾವಿನಿಂದ ಪೋಷಕರು ದಿಗ್ಭ್ರಾಂತರಾಗಿದ್ದಾರೆ. ಮಗನಿಗೆ ಬುದ್ಧಿವಾದ ಹೇಳಿದ್ದೆ ತಪ್ಪಾಯಿತೆ ಎಂದು ಗೋಳಾಡುತ್ತಿದ್ದಾರೆ. ಈ ಸಂಬಂಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಲ್ಲಿ ಸೋಮವಾರವಷ್ಟೇ ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ : ಮಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕಳೆದ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದರು. ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಪ್ರಕೃತಿ ಶೆಟ್ಟಿ(20) ಆತ್ಮಹತ್ಯೆ ಮಾಡಿಕೊಂಡವರು. ಜೀವನದಲ್ಲಿ ತಾನು ಹತಾಶಳಾಗಿದ್ದೇನೆ ಎಂದು ಬರೆದಿಟ್ಟು ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಇವರ ತಂದೆ ಪ್ರಶಾಂತ ಶೆಟ್ಟಿ ಮತ್ತು ತಾಯಿ ನೆಲೆಸಿದ್ದು, ಪ್ರಕೃತಿ ಶೆಟ್ಟಿ ಹಾಸ್ಟೆಲ್ನಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದರು. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಳಗಾವಿ: ಪೋಷಕರ ಬುದ್ಧಿವಾದಕ್ಕೆ ಮನನೊಂದು 14 ವರ್ಷದ ಬಾಲಕ ಆತ್ಮಹತ್ಯೆ